ಪ್ರವಾಹ ಪೀಡಿತ ಬ್ರೆಜಿಲಿಯನ್ನರಿಗೆ ನೆರವು ಕಳುಹಿಸಿದ ಪೋಪ್ ಫ್ರಾನ್ಸಿಸ್
ವರದಿ: ತುಲಿಯೋ ಫೊನೆಸ್ಕ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಬ್ರೆಜಿಲ್ ದೇಶದಲ್ಲಿ ಉಂಟಾದ ಪ್ರವಾಹದಿಂದ ನೊಂದಿರುವ ಜನರಿಗೆ ನೆರವು ನೀಡುವ ನಿಟ್ಟಿನಲ್ಲಿ ಸುಮಾರು ಒಂದು ಲಕ್ಷ ಯೂರೋಗಳನ್ನು ಬ್ರೆಜಿಲ್ ದೇಶದ ಪ್ರೇಷಿತ ರಾಯಭಾರಿ ಕಚೇರಿಗೆ ಕಳುಹಿಸಿದ್ದಾರೆ. ಮೇ ಆರಂಭದಿಂದ ಬ್ರೆಜಿಲ್ ದೇಶದ ರಿಯೋ ಗ್ರಾಂಡೆ ಡೆ ಸುಲ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.
ಪ್ರವಾಹ ಪೀಡಿತ ಸಂತ್ರಸ್ಥರಿಗೆ ಪೋಪ್ ಅವರ ಈ ನೆರವು ಕತ್ತಲಿನಲ್ಲಿ ಬೆಳಕಂತೆ ಬಂದಿದೆ ಎಂದು ಅಲ್ಲಿನ ಧರ್ಮಾಧ್ಯಕ್ಷ ಮಂಡಳಿಯ ಅಧ್ಯಕ್ಷರಾದ ಆರ್ಚ್'ಬಿಷಪ್ ಜೇಮಿ ಅವರು ಹೇಳಿದ್ದಾರೆ.
ಕಳೆದ ಭಾನುವಾರದ ತಮ್ಮ ರೆಜೀನಾ ಚೇಲಿ ಪ್ರಾರ್ಥನೆಯಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿರುವ ಜನರಿಗಾಗಿ ಪೋಪ್ ಫ್ರಾನ್ಸಿಸ್ ಮನಮಿಡಿದಿದ್ದರು. ಮಾತೆ ಮರಿಯಮ್ಮನವರ ಪ್ರಾರ್ಥನೆಯ ನಂತರ ಈ ಸಂಕಷ್ಟಕ್ಕೆ ಈಡಾಗಿರುವ ಎಲ್ಲರನ್ನೂ ಪ್ರಭುವು ಸಂತೈಸಲಿ ಎಂದು ಪ್ರಾರ್ಥಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ಕೇವಲ ಪ್ರಾರ್ಥನೆಯೊಂದಿಗೆ ಮಾತ್ರ ಬ್ರೆಜಿಲ್ ಜನತೆಯೊಂದಿಗೆ ತಮ್ಮ ಐಕ್ಯತೆಯನ್ನು ವ್ಯಕ್ತಪಡಿಸದೆ ಆರ್ಥಿಕ ನೆರವನ್ನೂ ಸಹ ನೀಡಿದ್ದಾರೆ.