ಪುನೀತ ಕಾರ್ಲೊ ಅಕ್ಯೂಟಿಸ್ ಅವರನ್ನು ಸಂತ ಪದವಿಗೇರಿಸಲು ಅನುಮತಿ ನೀಡಿದ ಪೋಪ್
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಸಂತರುಗಳ ಕ್ಯಾನನೈಸೇಷನ್ ಪ್ರಕ್ರಿಯೆ ಆಯೋಗದ ಫ್ರಿಫೇಕ್ಟ್ ಆದ ಕಾರ್ಡಿನಲ್ ಮಾರ್ಸೆಲ್ಲೋ ಸೆಮೆರಾರೋ ಅವರು ಗುರುವಾರ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದು, ಅನೇಕ ಪುರುಷ ಹಾಗೂ ಸ್ತ್ರೀಯರ ಸಂತ ಪದವಿಗೇರಿಸುವ ಪ್ರಕ್ರಿಯೆಗೆ ಅವರಿಂದ ಅನುಮತಿಯನ್ನು ಪಡೆದುಕೊಂಡಿದ್ದಾರೆ.
ಯುವ ಕಥೋಲಿಕರಿಗೆ, ಆಸಕ್ತಿಕರ ಸಂಗತಿಯೆಂದರೆ ಪುನೀತ ಕಾರ್ಲೋ ಅಕ್ಯೂಟಿಸ್ ಅವರಿಗೆ ಅರ್ಪಿತವಾದ ಪವಾಡವನ್ನು ಧರ್ಮಸಭೆ ಗುರುತಿಸಿರುವುದು.
ಪೋಪ್ ಫ್ರಾನ್ಸಿಸ್ ಅವರು ಪುನೀತ ಕಾರ್ಲೋ ಅವರನ್ನು ೨೦೨೦ ರಲ್ಲಿ ಅಸಿಸ್ಸಿಯಲ್ಲಿ ಪುನೀತ ಪದವಿಗೇರಿಸಿದ್ದರು. ಕಾರ್ಲೋ ಬದುಕಿರುವಾಗ ಅನೇಕ ಬಾರಿಗೆ ಇಲ್ಲಿಗೆ ಪುಣ್ಯಯಾತ್ರೆಯನ್ನು ಕೈಗೊಂಡಿದ್ದರು ಹಾಗೂ ಅವರ ಪಾರ್ಥೀವ ಶರೀರವನ್ನು ಇಲ್ಲಿಯೇ ಅಡಕ ಮಾಡಲಾಗಿದೆ.
ಪುನೀತ್ ಕಾರ್ಲೋ ಅಕ್ಯುಟಿಸ್ ಅವರ ಮಧ್ಯಸ್ಥಿಕೆಯಿಂದ ಉಂಟಾದ ಪವಾಡ
ಕೋಸ್ಟರೀಕಾದ ಲಿಲಿಯಾನ ಎಂಬುವವರ ಮಗಳು ಸೈಕಲ್ ತುಳಿಯುವಾಗ ಕೆಳಗೆ ಬಿದ್ದ ಪರಿಣಾಮ ಅವರ ತಲೆಗೆ ತೀವ್ರವಾದ ಪೆಟ್ಟುಬಿದ್ದು, ಆಸ್ಪತ್ರೆಗೆ ಸೇರಿಸಲಾಗಿತ್ತು. ಆಕೆಯನ್ನು ಪರಿಶೀಲಿಸಿದ ವೈದ್ಯರು, ತಲೆಯ ಭಾಗಕ್ಕೆ ಬಿದ್ದ ಪೆಟ್ಟು ಮೆದುಳಿಗೆ ಹಾನಿ ಮಾಡಿದ್ದು, ಕ್ಲಿಷ್ಟಕರ ಆಪರೇಶನ್ ಮಾಡಬೇಕು ಎಂದು ಹೇಳಿದ್ದರು. ಜೊತೆಗೆ, ಈ ಆಪರೇಷನ್ ಅನ್ನು ಮಾಡಿದರೂ ಸಹ ಆಕೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದಿದ್ದರು.
ಆ ಕೂಡಲೇ ಲಿಲಿಯಾನ ಅವರ ಕಾರ್ಯದರ್ಶಿ ಪುನೀತ ಕಾರ್ಲೋ ಅವರ ಮಧ್ಯಸ್ಥಿಕೆಗಾಗಿ ಪ್ರಾರ್ಥಿಸಿದ್ದರು. ತದ ನಂತರ ಲಿಲಿಯಾನ ಅಸಿಸ್ಸಿಗೆ ಪುಣ್ಯಯಾತ್ರೆಯನ್ನು ಕೈಗೊಂಡು, ಪುನೀತ ಕಾರ್ಲೋ ಅವರ ಪಾರ್ಥೀವ ಶರೀರದ ಮುಂದೆ ಮಗಳನ್ನು ಗುಣಪಡಿಸುವಂತೆ ಕೋರಿಕೆ ಇಟ್ಟಿದ್ದರು. ಇದಾದ ನಂತರ ಆಸ್ಪತ್ರೆಯಿಂದ ಕರೆ ಮಾಡಿದ ವೈದ್ಯರು ಆಕೆಯ ಮಗಳು ಸರಾಗವಾಗಿ ಉಸಿರಾಡುತ್ತಿರುವುದಾಗಿಯೂ ಹಾಗೂ ಮಾತನಾಡುತ್ತಿರುವುದಾಗಿಯೂ ಹೇಳಿದರು. ಆಕೆಯ ತಲೆಯಲ್ಲಿದ್ದ ಮೆದುಳಿನ ಗಾಯ ಮಾಯವಾಗಿತ್ತು. ಸ್ವಲ್ಪ ದಿನಗಳಲ್ಲೇ ಆಕೆ ಚೆನ್ನಾಗಿ ಚೇತರಿಸಿಕೊಂಡಳು.
ನಂತರ ತಾಯಿ ಹಾಗೂ ಮಗಳು ಅಸಿಸ್ಸಿಗೆ ಪುಣ್ಯಯಾತ್ರೆಯನ್ನು ಕೈಗೊಂಡು ಪುನೀತ ಕಾರ್ಲೋ ಅವರ ಸಮಾಧಿಯ ಬಳಿ ಧನ್ಯವಾಗಳನ್ನು ಅರ್ಪಿಸಿದರು.
ಇದೇ ವೇಳೆ ಪೋಪ್ ಫ್ರಾನ್ಸಿಸ್ ಪುನೀತ ಕಾರ್ಲೋ ಅಕ್ಯೂಟಿಸ್, ಪುನೀತ ಜೆಸಿಪ್ಪೆ ಅಲ್ಲಮಾನೋ, ಮರೀ ಲಿಯೋನಿ ಪರದೀಸ್ ಹಾಗೂ ಎಲೆನಾ ಗೆರ್ರಾ ಅವರ ಸಂತ ಪದವಿಗೇರಿಸುವ ಪ್ರಕ್ರಿಯೆಯ ಕುರಿತು ಚರ್ಚಿಸಲು ಕಾರ್ಡಿನಾಲರುಗಳ ಸಭೆಯನ್ನು ಕರೆಯುವುದಾಗಿ ಹೇಳಿದರು.