ಹಾಂಗ್ ಕಾಂಗ್ ಕ್ರೈಸ್ತ ಪಂಗಡದೊಂದಿಗೆ ಕ್ರೈಸ್ತ ಐಕ್ಯತೆಗಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್
ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಬುಧವಾರ ಹಾಂಗ್ ಕಾಂಗ್ ಕ್ರಿಶ್ಚಿಯನ್ ಕೌನ್ಸಿಲ್ ನ ನಿಯೋಗದ ಪ್ರತಿನಿಧಿಗಳನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿ, ಹೇಗೆ ಕ್ರೈಸ್ತರಾದ ನಾವು ಒಗ್ಗಟ್ಟಿನಿಂದ ಹಾಗೂ ಐಕ್ಯತೆಯಿಂದ ಕ್ರಿಸ್ತೀಯ ಹಾದಿಯಲ್ಲಿ ನಡೆಯಲು ಪ್ರಯತ್ನಿಸಬೇಕು ಎಂಬ ಕುರಿತು ಧ್ಯಾನಿಸಿದ್ದಾರೆ.
ಬುಧವಾರ ತಮ್ಮ ಸಾರ್ವಜನಿಕ ಭೇಟಿಗೂ ಮುಂಚಿತವಾಗಿ ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ಈ ನಿಯೋಗವನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್, ಅವರ ಭೇಟಿಗೆ ಧನ್ಯವಾದಗಳನ್ನು ತಿಳಿಸಿದರು.
೧೯೫೪ ರಲ್ಲಿ ಸ್ಥಾಪನೆಯಾದ ಹಾಂಗ್ ಕಾಂಗ್ ಕ್ರಿಶ್ಚಿಯನ್ ಕೌನ್ಸಿಲ್ ಪ್ರೊಟೆಸ್ಟೆಂಟ್ ಕ್ರೈಸ್ತ ಪಂಗಡವಾಗಿದೆ. ಇದು ವರ್ಲ್ಡ್ ಕೌನ್ಸಿಲ್ ಆಫ್ ಚರ್ಚಸ್ ನ ಸದಸ್ಯ ಕ್ರೈಸ್ತ ಸಂಘಟನೆಯಾಗಿದೆ.
ಆರ್ಥಡಾಕ್ಸ್ ಬಿಷಪ್ ಝಿಝಿಯೌಲಸ್ ಅವರ ಹೇಳಿಕೆ "ಕ್ರೈಸ್ತ ಐಕ್ಯತೆ ಎಂಬುದು ಕೊನೆಯ ತೀರ್ಪಿನ ದಿನ ನಿರ್ಧಾರವಾಗುತ್ತದೆ ಹಾಗೂ ಸಾಧ್ಯವಾಗುತ್ತದೆ. ಅಲ್ಲಿಯವರೆಗೂ ಸಹ ನಾವೆಲ್ಲರೂ ಒಬ್ಬರಿಗೊಬ್ಬರು ಪ್ರಾರ್ಥಿಸಿ, ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ" ಎಂಬ ಹೇಳಿಕೆಯನ್ನು ಪೋಪ್ ಫ್ರಾನ್ಸಿಸ್ ನೆನಪಿಸಿಕೊಂಡರು.
"ಇದು ಅತ್ಯಂತ ಮುಖ್ಯವಾಗಿದೆ. ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ ಏಕೆಂದರೆ ನಾವೆಲ್ಲರೂ ಯೇಸು ಕ್ರಿಸ್ತರಲ್ಲಿ ವಿಶ್ವಾಸವನ್ನು ಇಟ್ಟಿದ್ದೇವೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
"ದೀಕ್ಷಾಸ್ನಾನವು ನಮ್ಮೆಲ್ಲರನ್ನೂ ಒಂದಾಗಿಸುತ್ತದೆ ಹಾಗೂ ಹೊರಗಿನ ಶತೃಗಳಿಂದ ನಮ್ಮನ್ನು ರಕ್ಷಿಸುತ್ತದೆ." ಎಂದು ಹೇಳಿದ ಪೋಪ್ ಫ್ರಾನ್ಸಿಸ್ ಮುಂದುವರೆದು "ಶತೃಗಳು ಇರುವುದು ವಾಸ್ತವ; ಪ್ರಭು ಯೇಸುಕ್ರಿಸ್ತರು ಹೇಳುವಂತೆ ಧರ್ಮಸಭೆಗೆ ಹಿಂಸೆಗಳು ಸದಾ ಕಾದಿರುತ್ತವೆ" ಎಂದು ಹೇಳಿದರು.
ಪ್ರಭುವಿನ ಪ್ರಾರ್ಥನೆಯ ಮೂಲಕ ಪೋಪ್ ಫ್ರಾನ್ಸಿಸ್ ತಮ್ಮ ಮಾತನ್ನು ಮುಗಿಸಿದರು.