ಹುಡುಕಿ

ಸ್ಲೋವಾಕಿಯಾ ದೇಶದ ಪ್ರಧಾನ ಮಂತ್ರಿಗಳ ಮೇಲಿನ ದಾಳಿಯನ್ನು ಖಂಡಿಸಿದ ಪೋಪ್ ಫ್ರಾನ್ಸಿಸ್

ಸ್ಲೋವಾಕಿಯಾ ದೇಶದ ಅಧ್ಯಕ್ಷ ಜುಜಾನ ಕಪುಟೊವ ಅವರಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿರುವ ವಿಶ್ವಗುರು ಫ್ರಾನ್ಸಿಸ್, ಅಲ್ಲಿನ ಪ್ರಧಾನಿ ರಾಬರ್ಟ್ ಫಿಕೋ ಅವರ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಇದೆ ವೇಳೆ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಸ್ಲೋವಾಕಿಯಾ ದೇಶದ ಜನರಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಫ್ರಾಂಚೆಸ್ಕ ಮರ್ಲೊ, ಅಜಯ್ ಕುಮಾರ್

ಸ್ಲೋವಾಕಿಯಾ ದೇಶದ ಅಧ್ಯಕ್ಷ ಜುಜಾನ ಕಪುಟೊವ ಅವರಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿರುವ ವಿಶ್ವಗುರು ಫ್ರಾನ್ಸಿಸ್, ಅಲ್ಲಿನ ಪ್ರಧಾನಿ ರಾಬರ್ಟ್ ಫಿಕೋ ಅವರ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಇದೆ ವೇಳೆ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಸ್ಲೋವಾಕಿಯಾ ದೇಶದ ಜನರಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ವ್ಯಾಟಿಕನ್ ರಾಜ್ಯದ ಸ್ಲೋವಾಕಿಯಾ ದೇಶದ ರಾಯಭಾರ ಕಚೇರಿಯ ಮೂಲಕ ಹಂಚಿಕೊಂಡಿರುವ ಟೆಲಿಗ್ರಾಮ್ ಸಂದೇಶದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು "ಸ್ಲೋವಾಕಿಯಾ ದೇಶದ ಪ್ರಧಾನ ಮಂತ್ರಿ ರಾಬರ್ಟ್ ಫಿಕೋ ಅವರ ಮೇಲಿನ ಹತ್ಯೆ ಪ್ರಯತ್ನದ ದಾಳಿಯ ಕುರಿತು ನನಗೆ ಈಗಷ್ಟೇ ತಿಳಿಯಿತು. ಈ ಹಿಂಸಾ ಕೃತ್ಯವನ್ನು ನಾನು ಕಟುವಾಗಿ ಖಂಡಿಸುತ್ತೇನೆ ಹಾಗೂ ಪ್ರಧಾನ ಮಂತ್ರಿಗಳು ಶೀಘ್ರವೇ ಗುಣಮುಖರಾಗಿ ಹಿಂತಿರುಗುವಂತೆ ಪ್ರಾರ್ಥಿಸುತ್ತೇನೆ" ಎಂದು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಸ್ಲೋವಾಕಿಯಾ ದೇಶದ ಜನರಿಗೆ ತಮ್ಮ ವಿಷಮ ಪರಿಸ್ಥಿತಿಯ ಸಂದರ್ಭದಲ್ಲಿ ದೇವರ ಕೃಪಾಶೀರ್ವಾದಗಳನ್ನು ಕೋರಿರುವ ವಿಶ್ವಗುರು ಫ್ರಾನ್ಸಿಸ್, ಅವರೊಂದಿಗೆ ಐಕ್ಯತೆಯನ್ನು ಪ್ರದರ್ಶಿಸಿದ್ದಾರೆ.

ಬುಧವಾರ ರಾಜಕೀಯ ಸಭೆಯೊಂದರಲ್ಲಿ ಭಾಗವಹಿಸಿ ಬರುತ್ತಿದ್ದ ಪ್ರಧಾನಮಂತ್ರಿ ರಾಬರ್ಟ್ ಫಿಕೋ ಅವರ ಮೇಲೆ ದುಷ್ಕರ್ಮಿಯೊಬ್ಬ ಹಲವು ಸುತ್ತುಗಳ ಗುಂಡಿನ ದಾಳಿಯನ್ನು ನಡೆಸಿದ್ದನು. ಇದರ ಬೆನ್ನಲ್ಲೇ ಕೂಡಲೇ ಪ್ರಧಾನಮಂತ್ರಿಯವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ವೈದ್ಯರ ಪ್ರಕಾರ ಪ್ರಧಾನ ಮಂತ್ರಿಗಳ ಪರಿಸ್ಥಿತಿ ಗಂಭೀರವಾಗಿದ್ದು ಅವರಿಗೆ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ವರದಿಯಾಗಿದೆ.

ಗುಂಡಿನ ದಾಳಿಯನ್ನು ನಡೆಸಿದ ದುಷ್ಕರ್ಮಿಯನ್ನು ಪೊಲೀಸರು ಹೊಂದಿಸಿದ್ದು ತನಿಖೆ ನಡೆಸುತ್ತಿದ್ದಾರೆ.

18 May 2024, 16:41