ಪೋಪ್: ಶಿಕ್ಷಣ ಮನುಷ್ಯರನ್ನು ರೂಪಿಸಬೇಕೆ ಹೊರತು ಅಸಾಧ್ಯ ಮಾದರಿಗಳನ್ನು ಕಲ್ಪಿಸಬಾರದು
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಬರ್ಸಿಲೋನಾದ ಬ್ಲಾಂಕ್ವರ್ನ ಫೌಂಡೇಶನ್ ಸದಸ್ಯರನ್ನು ಭೇಟಿ ಮಾಡಿ ಮಾತನಾಡಿದ ಪೋಪ್ ಫ್ರಾನ್ಸಿಸ್, "ಬ್ಲಾಂಕ್ವರ್ನ" ಎಂಬ ಪದವನ್ನು 14ನೇ ಶತಮಾನದ ತತ್ವಶಾಸ್ತ್ರಜ್ಞ ಹಾಗೂ ದೈವಶಾಸ್ತ್ರಜ್ಞ ಪುನೀತ ರಮೋನ್ ಲುಲ್ ಅವರ ಸಾಹಿತಿಕ ಪಾತ್ರದ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಈ ಪಾತ್ರದ ಮೂಲಕ ತನ್ನ ಕಾಲಘಟ್ಟದ ಕುರಿತು ವಿವರಣೆಯನ್ನು ನೀಡಲು ಪುನೀತ ರಮೋನ್ ಲುಲ್ ಅವರು ಬಯಸಿದರು ಎಂದು ಹೇಳಿದ ಪೋಪ್ ಫ್ರಾನ್ಸಿಸ್, ಅವರ ಶೈಕ್ಷಣಿಕ ರೂಪಕವು ಮಾದರಿ ಕ್ರೈಸ್ತ ಬದುಕನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಪ್ರಸ್ತುತವಾಗಿದೆ ಎಂದು ಹೇಳಿದರು.
ಪುನೀತ ರಮೋನ್ ಲುಲ್ ಅವರು ವಾಸ್ತವವನ್ನು ಮರೆಮಾಚಿ ಸೂಪರ್ ಹೀರೋಗಳಾಗುವವರನ್ನು ಅನುಕರಿಸಲಿಲ್ಲ ಬದಲಿಗೆ ಸರಳವಾಗಿ ವಾಸ್ತವವನ್ನು ತಿಳಿಯಪಡಿಸುತ್ತಾ, ಜೊತೆ ಜೊತೆಗೆ ಪ್ರಭುವಿಗೆ ಸೇವೆ ಸಲ್ಲಿಸುತ್ತಾ ಜೀವನವನ್ನು ಸವಿಸುವಂತೆ ಕರೆ ನೀಡಿದರು ಎಂದು ಹೇಳಿದರು.
13ನೇ ಶತಮಾನದಲ್ಲಿ ಇದ್ದಂತೆಯೇ ಈಗಲೂ ಸಹ ಯುವಜನರು ಎಲ್ಲಾ ರೀತಿಯ ಶೋಧನೆಗಳನ್ನು ಮೀರಿ ದೇವರಿಗೆ ಹತ್ತಿರವಾಗಲು ಪ್ರಯತ್ನಿಸಬೇಕು ಎಂದು ಹೇಳಿದ ಪೋಪ್ ಫ್ರಾನ್ಸಿಸ್, ಪುನೀತ ರಮೋನ್ ಲುಲ್ ಅವರ ಹೆಸರನ್ನು ವಿಶ್ವವಿದ್ಯಾನಿಲಯಕ್ಕೆ ತೆಗೆದುಕೊಳ್ಳುವುದರ ಮೂಲಕ, ಅವರ ಬದ್ಧತೆಯನ್ನು ಅನುಕರಿಸಬೇಕಿದೆ ಎಂದು ಹೇಳಿದರು.
ವಾಸ್ತವವನ್ನು ವಿಮರ್ಶಿಸುವುದರ ಕುರಿತು ಶಿಕ್ಷಣವನ್ನು ನೀಡಬೇಕೆ ಹೊರತು ಪಲಾಯನ ಮಾಡುವುದಕ್ಕಾಗಿ ಅಥವಾ ವಾಸ್ತವವನ್ನು ಮರೆಮಾಚಿ, ಕಲ್ಪನಾ ಲೋಕಕ್ಕೆ ಜಾರಿಕೊಳ್ಳುವಂತಹ ಶಿಕ್ಷಣವನ್ನು ನೀಡಬಾರದು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು. ಕೊನೆಗೆ ಅವರು ನಮ್ಮ ಎಲ್ಲಾ ಶಿಕ್ಷಣದಲ್ಲಿ ಯೇಸುವಿನ ಪ್ರತಿಬಿಂಬವನ್ನು ಅಥವಾ ಏಸುಕ್ರಿಸ್ತರು ನಮ್ಮ ಶಿಕ್ಷಣದಲ್ಲಿ ಪ್ರತಿನಿಧಿಸುವವರಾಗಬೇಕು ಎಂದು ಹೇಳಿದರು.