ಪೋಪ್ ಫ್ರಾನ್ಸಿಸ್: ಜಗತ್ತಿಗೆ ಕ್ರೈಸ್ತ ಭರವಸೆಯ ಅವಶ್ಯಕತೆ ಇದೆ
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ನಮ್ಮ ಹೃದಯವು ತನ್ನ ಅಂತಿಮ ವಿಧಿಯ ಕುರಿತು ಚಿಂತಿಸುವಾಗ ನಮ್ಮ ಹೃದಯಕ್ಕೆ ನೀಡಲಾದ ಉತ್ತರವೆಂದರೆ ಭರವಸೆ ಎಂದು ವಿಶ್ವಗುರು ಫ್ರಾನ್ಸಿಸ್ ಬುಧವಾರ ತಮ್ಮ ಸಾರ್ವಜನಿಕ ದರ್ಶನದಲ್ಲಿ ಹೇಳಿದ್ದಾರೆ.
ಬದುಕಿನ ಅರ್ಥವೇನು ಎಂಬ ಪ್ರಶ್ನೆಗೆ ನಕಾರಾತ್ಮಕ ಉತ್ತರಗಳು ಮನುಷ್ಯನನ್ನು ದುಃಖಕ್ಕೆ ದೂಡುತ್ತವೆ. ಬದುಕಿನ ಪ್ರಯಾಣದಲ್ಲಿ, ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಏನೂ ಇಲ್ಲವೆಂದಾದಲ್ಲಿ, ಈ ಪ್ರಯಾಣವಾದರೂ ಏತಕ್ಕೆ? ಎಂದು ವಿಶ್ವಗುರು ಫ್ರಾನ್ಸಿಸ್ ಪ್ರಶ್ನಿಸಿದ್ದಾರೆ. ಎಷ್ಟೋ ಜನ ಬದುಕಿನಲ್ಲಿ ಭರವಸೆಯನ್ನು ಕಳೆದುಕೊಂಡ ಕಾರಣಕ್ಕೆ ತಮ್ಮ ಅಮೂಲ್ಯ ಜೀವನವನ್ನು ಕಳೆದುಕೊಂಡಿದ್ದಾರೆ ಎಂದು ಹೇಳುತ್ತಾ ಅವರು ವಿಶ್ವಗುರು ಬೆನೆದಿಕ್ಟ್ ಅವರ ಮಾತುಗಳನ್ನು ನೆನಪಿಸಿಕೊಂಡರು.
ತಮ್ಮ ಸ್ವಂತ ಪರಿಶ್ರಮದಿಂದ ಭರವಸೆ ಬರುವುದಿಲ್ಲ ಎಂದು ಕ್ರೈಸ್ತರು ಅರ್ಥ ಮಾಡಿಕೊಂಡಿದ್ದಾರೆ. ನಾವು ಭವಿಷ್ಯವನ್ನು ನಂಬುತ್ತೇವೆ ಎಂದರೆ ಏಸುಕ್ರಿಸ್ತರು ನಮಗಾಗಿ ಮರಣ ಹೊಂದಿ ತದನಂತರ ಪುನರುತ್ಥಾನರಾಗಿದ್ದಾರೆ ಎಂದು ನಾವು ಗಾಢವಾಗಿ ವಿಶ್ವಾಸಿಸುತ್ತೇವೆ. ಭರವಸೆ ಎಂಬುದು ದೈವ ಶಾಸ್ತ್ರೀಯ ಸದ್ಗುಣವಾಗಿದೆ ಏಕೆಂದರೆ ಅದು ನಮ್ಮಿಂದ ಬರುವುದಲ್ಲ ಬದಲಿಗೆ ಅದು ದೇವರಿಂದ ಬರುವುದಾಗಿದೆ.
ಭರವಸೆಯ ಕುರಿತ ಪಾಪಗಳ ವಿರುದ್ಧ ಎಚ್ಚರಿಕೆಯನ್ನು ನೀಡಿದ ವಿಶ್ವಗುರು ಫ್ರಾನ್ಸಿಸ್, ನಾವು ಭರವಸೆಯನ್ನು ಕಳೆದುಕೊಳ್ಳುತ್ತೇವೆ ಎಂದರೆ ದೇವರ ಕರುಣೆಯನ್ನು ಹಾಗೂ ಅವರ ಪ್ರೀತಿಯನ್ನು ನಾವು ವಿಶ್ವಾಸಿಸುವುದಿಲ್ಲ ಎಂದು ಅರ್ಥ ಎಂದು ಹೇಳಿದರು.
ಈ ಜಗತ್ತಿಗೆ ಇಂದು ಕ್ರೈಸ್ತ ಭರವಸೆಯ ಅವಶ್ಯಕತೆ ಇದೆ. ಅದರ ಜೊತೆಗೆ ತಾಳ್ಮೆ ಎಂಬ ಸದ್ದುಗುಣದ ಅವಶ್ಯಕತೆಯೂ ಇದೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.
ಅಂತಿಮವಾಗಿ ತಮ್ಮ ಸಾರ್ವಜನಿಕ ದರ್ಶನದಲ್ಲಿ ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, "ಮುಂದೆ ಹೋಗಿ ಭರವಸೆಯ ವರದಾನಕ್ಕಾಗಿ ಬೇಡಿಕೊಳ್ಳಿರಿ. ಅಂತಿಮ ಕ್ಷಣಕ್ಕಾಗಿ ಎದುರು ನೋಡಿರಿ. ಸದಾ ಏಸುಕ್ರಿಸ್ತರಿಗೆ ಸನಿಹವಾಗಿರಿ ಏಕೆಂದರೆ ಸಾವು ಎಂದಿಗೂ ವಿಜಯಿಯಾಗುವುದಿಲ್ಲ." ಎಂದು ಹೇಳಿದರು.