ಪವಿತ್ರಾತ್ಮರು ವಿಶ್ವಶಾಂತಿಯನ್ನು ಸ್ಥಾಪಿಸಲಿ: ಪೋಪ್ ಪ್ರಾರ್ಥನೆ
ವರದಿ: ವ್ಯಾಟಿಕನ್ ನ್ಯೂಸ್
ಭಾನುವಾರ ತಮ್ಮ ರೆಜೀನಾ ಚೇಲಿ ಪ್ರಾರ್ಥನೆಯ ನಂತರ ಪೋಪ್ ಫ್ರಾನ್ಸಿಸ್ ಅವರು ಮತ್ತೊಮ್ಮೆ ವಿಶ್ವಶಾಂತಿಗಾಗಿ ಮನವಿ ಮಾಡಿ, ಪ್ರಾರ್ಥಿಸಿದ್ದಾರೆ. ಇಸ್ರೇಲ್, ಪ್ಯಾಲೆಸ್ತೀನ್, ಮತ್ತು ಉಕ್ರೇನ್ ದೇಶಗಳಲ್ಲಿ ನಡೆಯುತ್ತಿರುವ ಯುದ್ಧಗಳು ಕೊನೆಗೊಂಡು, ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ.
ಪಂಚಶತ್ತಮ ಭಾನುವಾರದಂದು ಸಂತ ಪೇತ್ರರ ಚೌಕದಲ್ಲಿ ರೆಜೀನಾ ಚೇಲಿ ಪ್ರಾರ್ಥನೆಯನ್ನು ಮಾಡುತ್ತಾ, ಪೋಪ್ ಫ್ರಾನ್ಸಿಸ್ ಪವಿತ್ರಾತ್ಮರು ಹೇಗೆ ನಮ್ಮ ಬದುಕಿನಲ್ಲಿ ಕಾರ್ಯನಿರ್ವಹಿಸಿ ಬದಲಾವಣೆಯನ್ನು ತರುತ್ತಾರೆ ಎಂದು ಹೇಳಿದರಲ್ಲದೆ, ನಮ್ಮೆಲ್ಲರ ವಿಭಿನ್ನತೆಗಳ ನಡುವೆಯೂ ಅವರು ಸಾಮರಸ್ಯವನ್ನು ಮೂಡಿಸುತ್ತಾರೆ ಎಂದು ಹೇಳಿದರು. "ಪಿತ, ಸುತ, ಹಾಗೂ ಪವಿತ್ರಾತ್ಮರು ನಮ್ಮ ಹೃದಯಗಳಲ್ಲಿ, ಬದುಕಿನಲ್ಲಿ ಹಾಗೂ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸಲಿ" ಎಂದು ಪ್ರಾರ್ಥಿಸಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್, ಪಂಚಶತ್ತಮ ಹಬ್ಬದ ದಿನದಂದು ಪವಿತ್ರಾತ್ಮರು ನಮ್ಮ ಬದುಕಿನಲ್ಲಿ ಆಗಮಿಸಿ ನಮ್ಮನ್ನು ಸಂಪೂರ್ಣವಾಗಿಸುವಂತೆ ನಾವೆಲ್ಲರೂ ಪ್ರಾರ್ಥಿಸಬೇಕು ಎಂದರು. "ನಾವು ಜೀವಿಸುತ್ತಿರುವ ಈ ವಿಷಮ ಕಾಲಘಟ್ಟವು ಯುದ್ಧ ಮತ್ತು ನೋವಿನಿಂದ ತುಂಬಿದೆ. ಪವಿತ್ರಾತ್ಮರು ನಮ್ಮ ವಿಶ್ವದಲ್ಲಿ ಪ್ರಸ್ತುತ ನಡೆಸುತ್ತಿರುವ ಎಲ್ಲಾ ರೀತಿಯ ಯುದ್ಧಗಳನ್ನು ನಿಲ್ಲಿಸಲಿ. ವಿಶೇಷವಾಗಿ ಉಕ್ರೇನ್, ಪ್ಯಾಲೆಸ್ತೀನ್ ಹಾಗೂ ಇಸ್ರೇಲ್ ದೇಶದಲ್ಲಿ ಶಾಂತಿ ಸ್ಥಾಪಿಸಲಿ ಎಂದು ಪ್ರಾರ್ಥಿಸುವಂತೆ ಎಲ್ಲರಿಗೂ ಕರೆ ನೀಡಿದರು.