ಪೋಪ್ ಫ್ರಾನ್ಸಿಸ್: ತಮ್ಮ ಸ್ವರ್ಗಾರೋಹಣದ ಮೂಲಕ ಯೇಸುಕ್ರಿಸ್ತರು ನಮ್ಮನ್ನು ಮುನ್ನಡೆಸುತ್ತಾರೆ
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಜಗತ್ತಿನ ಬಹುತೇಕ ದೇಶಗಳು ಪ್ರಭುವಿನ ಸ್ವರ್ಗಾರೋಹಣ ಹಬ್ಬವನ್ನು ಕೊಂಡಾಡುತ್ತಿರುವ ಹೊತ್ತಿನಲ್ಲಿ, ಇಂದು ತಮ್ಮ ರೆಜೀನಾ ಚೇಲಿ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಯೇಸುಕ್ರಿಸ್ತರ ಸ್ವರ್ಗಾರೋಹಣದ ಅರ್ಥದ ಕುರಿತು ಮಾತನಾಡಿ, ಚಿಂತನೆಯನ್ನು ನಡೆಸಿದರು.
ಮುಂದುವರೆದು ಮಾತನಾಡಿದ ಅವರು, ಪ್ರಭುವಿನ ಸ್ವರ್ಗಾರೋಹಣ ಅಥವಾ ಯೇಸುಕ್ರಿಸ್ತರು ತಮ್ಮ ತಂದೆಯ ಬಳಿಗೆ ಹಿಂದಿರುಗಿ ಹೋಗಿರುವುದು ನಮಗೆ ಸ್ವರ್ಗದ ಹಾದಿಯನ್ನು ತೆರೆಯುತ್ತದೆ. ಇದು ಬೇರ್ಪಡಿಸುವಿಕೆ ಅಲ್ಲ; ಬದಲಿಗೆ ನಮ್ಮ ಅಂತಿಮ ನೆಲೆಯಾಗಿದೆ. ಪರ್ವತವನ್ನು ಏರುವ ಸಹ ಪಯಣಿಗನಂತೆ, ಕ್ರಿಸ್ತರು ಸ್ವರ್ಗಾರೋಹಣದ ಮೂಲಕ ಧರ್ಮಸಭೆಯನ್ನು ಹಾಗೂ ಅವರ ದೇಹವನ್ನು ಸ್ವರ್ಗಕ್ಕೆ ಒಯ್ಯುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.
"ನಾವೂ ಸಹ ಅವರೊಂದಿಗೆ, ಅವರ ದೇಹದ ಭಾಗಗಳಾಗಿ ಸ್ವರ್ಗಕ್ಕೆ ಹೋಗುತ್ತೇವೆ" ಎಂದು ಅವರು ನುಡಿದಿದ್ದಾರೆ.
"ಪ್ರಭುವನ್ನು ನಾವು ಒಂದೊಂದೇ ಮೆಟ್ಟಿಲುಗಳನ್ನು ಹತ್ತುವಂತೆ, ಅವರ ಹೆಜ್ಜೆಗಳಲ್ಲಿ ಹೆಜ್ಜೆಗಳನ್ನಿಟ್ಟು ಹಿಂಬಾಲಿಸಬೇಕಿದೆ" ಎಂದು ಹೇಳುವ ಪೋಪ್, "ಯಾವುದೇ ಒಂದು ಪರ್ವತವನ್ನು ಹತ್ತಬೇಕಾದರೆ ನಮಗೆ ಆಮ್ಲಜನಕ ಹಾಗೂ ಉತ್ತಮ ಗಾಳಿಯ ಅವಶ್ಯಕತೆ ಇದೆ. ಇದನ್ನು ಪಡೆಯಲು ನಾವು ಪವಿತ್ರಾತ್ಮರಿಂದ ಅಭ್ಯಂಗಿರಾಗಬೇಕಿದೆ" ಎಂದು ಹೇಳಿದರು.
"ಇದನ್ನು ನಾವು ಹೆಚ್ಚು ಮಾಡುವುದರಿಂದ ಹೆಚ್ಚು ರೂಪಾಂತರ ಹಾಗೂ ಪರಿವರ್ತನೆಯನ್ನು ಹೊಂದುತ್ತೇವೆ" ಎಂದು ವಿಶ್ವಗುರು ಫ್ರಾನ್ಸಿಸ್ ನುಡಿಯುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ಭಕ್ತಾಧಿಗಳಿಗೆ ಅವರು ಯೇಸುವನ್ನು ಹಿಂಬಾಲಿಸುತ್ತಿದ್ದಾರೆಯೇ ಎಂಬುದನ್ನು ಧ್ಯಾನಿಸಿ, ತಮ್ಮನ್ನೇ ಪ್ರಶ್ನಿಸಿಕೊಳ್ಳಲು ಹೇಳಿದರು.
ಅಂತಿಮವಾಗಿ, ಸ್ವರ್ಗಕ್ಕೆ ನಮ್ಮ ಪಯಣದ ಹಾದಿಯಲ್ಲಿ ಮಾತೆ ಮರಿಯಮ್ಮನವರು ನಮ್ಮ ಜೊತೆಯಾಗಿ, ನಮಗಾಗಿ ಪ್ರಾರ್ಥಿಸಲಿ ಎಂದು ಹೇಳಿದರು.