ಪೋಪ್: ಧರ್ಮಸಭೆಗೆ ಎಲ್ಲರಿಗೂ ಮುಕ್ತ ಅವಕಾಶವಿದೆ; ಆದರೆ ಸಲಿಂಗ ವಿವಾಹಗಳಿಗೆ ಮಾನ್ಯತೆ ಇಲ್ಲ
ವರದಿ: ಸಾಲ್ವತೋರೆ ಚೆರ್ನೂಝಿಯೊ, ಅಜಯ್ ಕುಮಾರ್
ಸಿಬಿಎಸ್ ಈವ್ನಿಂಗ್ ನ್ಯೂಸ್ ನಿರ್ದೇಶಕಿ ನೋರಾ ಓಡೊನ್ನೆಲ್ ಅವರೊಂದಿಗೆ ಸಂದರ್ಶನವನ್ನು ನೀಡುತ್ತಾ ಮಾತನಾಡಿದ ಪೋಪ್ ಫ್ರಾನ್ಸಿಸ್, ಮುಕ್ತ ಧರ್ಮಸಭೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.
"ಶುಭ ಸಂದೇಶ ಎಂಬುದು ಎಲ್ಲರಿಗೂ ಇರುವಂತದ್ದು. ಎಂತಹ ಪಾಪಿಗಳಿಗೂ ತೆರೆದಿರುವಂತದ್ದು. ಒಂದು ವೇಳೆ ಧರ್ಮಸಭೆ ಚೆಕ್-ಬಂಧಿಗಳನ್ನು ಹಾಕಿದರೆ, ಅದು ಧರ್ಮಸಭೆಯಾಗಿ ಉಳಿಯುವುದಿಲ್ಲ" ಎಂದು ಪೋಪ್ ಫ್ರಾನ್ಸಿಸ್ ತಮ್ಮ ಮುಕ್ತ ಧರ್ಮಸಭೆಯ ಶೈಲಿಯ ಕುರಿತು ಹೇಳಿದ್ದಾರೆ.
"ವೈಯಕ್ತಿಕ ವ್ಯಕ್ತಿಗಳನ್ನು ಆಶೀರ್ವದಿಸುವುದಕ್ಕೆ ಯಾವುದೇ ಅಭ್ಯಂತರ ಇಲ್ಲದಿದ್ದರೂ, ಸಲಿಂಗ ವಿವಾಹಗಳಿಗೆ ಮಾನ್ಯತೆ ದೊರಕುವುದಿಲ್ಲ. ಏಕೆಂದರೆ ಅದು ಧರ್ಮಸಭೆಯ ಕಾನೂನಿಗೆ ವಿರುದ್ಧವಾಗಿದೆ" ಎಂದು ಹೇಳಿದರು.
ಸಲಿಂಗಪ್ರೇಮದ ಕುರಿತು ಸಂದರ್ಶಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೋಪ್ ಫ್ರಾನ್ಸಿಸ್, "ಸಲಿಂಗಪ್ರೇಮ ಎಂಬುದು ಅಪರಾಧವಲ್ಲ; ಅದು ಮಾನವ ಸ್ಥಿತಿ ಎಂದು ಹೇಳಿದ್ದಾರೆ. ಬಾಡಿಗೆ ತಾಯ್ತನದ ಕುರಿತು ಮಾತನಾಡಿದ ಅವರು, ಅದನ್ನು ಟೀಕಿಸಿ, ಅದೊಂದು ರೀತಿಯ ವ್ಯಾಪಾರ ಎಂದು ಹೇಳಿದ್ದಾರೆ.
ಇನ್ನು ಧರ್ಮಸಭೆಯಲ್ಲಿ ತಮ್ಮ ಪೋಪರ ಅಧಿಕಾರವನ್ನು ಟೀಕಿಸುವ ಸಂಪ್ರದಾಯವಾದಿಗಳ ಕುರಿತ ಪ್ರಶ್ನೆಗೆ ಉತ್ತರಿಸಿರುವ ಅವರು "ಸಂಪ್ರದಾಯವಾದಿಗಳು ಒಂದು ಯೋಚನೆಯ ಹೊರತಾಗಿ ಏನನ್ನೂ ಚಿಂತಿಸುವುದಿಲ್ಲ. ಸಂಪ್ರವಾದಿತನ ಎಂಬುದು ಆತ್ಮಹತ್ಯಾತ್ಮಕ ಧೋರಣೆ" ಎಂದು ನುಡಿದಿದ್ದಾರೆ.
ಸಿದ್ಧಾಂತಗಳನ್ನು ಖಂಡಿಸಿರುವ ಪೋಪ್ ಫ್ರಾನ್ಸಿಸ್, ಯುದ್ಧಗಳ ಮೂಲ ಕಾರಣ ಸಿದ್ಧಾಂತಗಳಾಗಿವೆ. ಯುದ್ಧಗ್ರಸ್ಥ ದೇಶಗಳಾದ ಉಕ್ರೇನ್, ಇಸ್ರೇಲ್ ಹಾಗೂ ಗಾಜಾದಲ್ಲಿ ಶಾಂತಿ ಸ್ಥಾಪನೆಗಾಗಿ ಮನವಿ ಮಾಡಿ, ಪ್ರಾರ್ಥಿಸುವ ಕರೆ ನೀಡಿದರು.
ವಿಶ್ವದ ವಿವಿಧ ದೇಶಗಳಲ್ಲಿ ವಲಸಿಗರು ಅನುಭವಿಸುತ್ತಿರುವ ನೋವು ಹಾಗೂ ಕಷ್ಟಗಳಿಗೆ ಸಹಾನುಭೂತಿಯನ್ನು ವ್ಯಕ್ತಪಡಿಸುವ ಅವರು, ಅವರ ವಿರುದ್ಧದ ಅಸಹನೆಯನ್ನು ಟೀಕಿಸಿದರು. ಇನ್ನೂ ಧರ್ಮಸಭೆಯಲ್ಲಿನ ದೌರ್ಜನ್ಯಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ದೌರ್ಜನ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಈ ಕುರಿತೂ ಇನ್ನೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.