ಅಮ್ಸ್ಟರ್ಡ್ಯಾಂ ಯಾತ್ರಿಕರನ್ನು ಸ್ವಾಗತಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಮೇ ನಾಲ್ಕರಂದು ಬೆಳಿಗ್ಗೆ ನೆದರ್ಲ್ಯಾಂಡ್ ದೇಶದ ರಾಜಧಾನಿ ಅಮ್ಸ್ಟರ್ಡ್ಯಾಂ ನಗರದಿಂದ ಆಗಮಿಸಿದ ಯಾತ್ರಿಕರನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್, ಹೇಗೆ ಈ ನಗರದ ಬೆಳವಣಿಗೆಯು ಕಥೋಲಿಕ ವಿಶ್ವಾಸದೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ಅವಲೋಕಿಸಿದರು. ಈ ವರ್ಷ ಅಕ್ಟೋಬರ್ 2024ರಲ್ಲಿ ಅಮ್ಸ್ಟರ್ಡ್ಯಾಂ ನಗರವು ತನ್ನ ಸ್ಥಾಪನೆಯ 750 ವರ್ಷಗಳನ್ನು ಪೂರೈಸುತ್ತಿದೆ. ಈ ನಗರದ ಇತಿಹಾಸದಲ್ಲಿ ನಡೆದ ಒಂದು ಅವಿಸ್ಮರಣೀಯ ಘಟನೆಯನ್ನು ನೆನಪಿಸಿಕೊಂಡ ವಿಶ್ವಗುರು ಫ್ರಾನ್ಸಿಸ್, 1345 ರಲ್ಲಿ ಈ ನಗರದಲ್ಲಿ ನಡೆದ ಪರಮ ಪ್ರಸಾದದ ಪವಾಡವನ್ನು ನೆನಪಿಸಿಕೊಂಡು, ಇದರ ಸವಿ ನೆನಪಿಗೆ ಈಗಲೂ ಸಹ ಮೌನ ಮೆರವಣಿಗೆಯು ಇಲ್ಲಿ ನಡೆಯುತ್ತದೆ ಎಂದು ಹೇಳಿದರು.
ಈ ಯಾತ್ರಿಕದಲ್ಲಿ ಸುಮಾರು 50 ಜನರನ್ನು ಭೇಟಿ ಮಾಡಿದ ಫ್ರಾನ್ಸಿಸ್, ಸೈಂಟ್ ನಿಕಲಸ್ ಬಸಿಲಿಕಾದ ರೆಕ್ಟರ್ ಅವರನ್ನು, ರಸೆಲ್ ಕುಟುಂಬಸ್ಥರನ್ನು, ಹಾಗೂ ಕ್ಯಾಥೋಲಿಕ್ ಫೌಂಡೇಶನ್ ಫಾರ್ ದಿ ಪ್ರಮೋಷನ್ ಆಫ್ ವೆಲ್ಫೇರ್ ಇನ್ ಅಮ್ಸ್ಟರ್ಡ್ಯಾಂ ಸಂಸ್ಥೆಯ ಸದಸ್ಯರುಗಳನ್ನು ಭೇಟಿ ಮಾಡಿದರು.
ಈ ಸಂಸ್ಥೆಯು ನಗರದಲ್ಲಿ ಮಾಡುತ್ತಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದ ವಿಶ್ವಗುರು ಫ್ರಾನ್ಸಿಸ್, ಪ್ರಭುವಿನ ಕೃಪೆಯಿಂದ ಮತ್ತಷ್ಟು ಬಡವರಿಗೆ, ವಲಸಿಗರಿಗೆ, ನಿರ್ಗತಿಕರಿಗೆ ಹಾಗೂ ಶೋಷಿತರಿಗೆ ಸೇವೆಯನ್ನು ಮಾಡುವಂತೆ ಪ್ರೋತ್ಸಾಹಿಸಿದರು. ವಿಶ್ವಾಸ ಭರವಸೆ ಹಾಗೂ ದಾನ ಧರ್ಮದಲ್ಲಿ ನಿಮ್ಮನ್ನು ಬಲಪಡಿಸಲು ಹಾಗೂ ನಿಮಗೆ ಬೇಕಾದ ಸಕಲವನ್ನು ದಯಪಾಲಿಸಲು ನಾನು ಮಾತೆ ಮರಿಯಮ್ಮನವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.