ಹುಡುಕಿ

ಸಮುದಾಯಿಕ ಜೀವನವನ್ನು ಅಳವಡಿಸಿಕೊಳ್ಳುವಂತೆ ಸ್ವಿಸ್ ಗಾರ್ಡುಗಳಿಗೆ ಕರೆ ನೀಡಿದ ಪೋಪ್ ಫ್ರಾನ್ಸಿಸ್

ಪೊಂಟಿಫಿಕಲ್ ಸ್ವಿಸ್ ಗಾರ್ಡ್ಸ್ ಸೇನೆಗೆ ನೂತನವಾಗಿ ಸೇರ್ಪಡೆಯಾಗಿರುವ ಸದಸ್ಯರ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ, ಸ್ವಿಸ್ ಗಾರ್ಡ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ತಮ್ಮ ಸೇವೆಯಲ್ಲಿ ಮಾನವ ಸಂಬಂಧಗಳು ಹಾಗೂ ಸಮುದಾಯಿಕ ಜೀವನವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

ವರದಿ: ಲೀಸಾ ಝೇಂಗಾರೀನಿ, ಅಜಯ್ ಕುಮಾರ್

ಪ್ರತಿ ವರ್ಷ ಮೇ 6ನೇ ತಾರೀಕು ನಡೆಯುವ ಸ್ವಿಸ್ ಗಾರ್ಡ್ಸ್ ಸೇನೆಗೆ ನೂತನವಾಗಿ ಸೇರ್ಪಡೆಯಾಗಿರುವ ಸದಸ್ಯರ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೂ ಮುಂಚಿತವಾಗಿ, ಸ್ವಿಸ್ ಗಾರ್ಡುಗಳನ್ನು ಪೋಪ್ ಫ್ರಾನ್ಸಿಸ್ ಸೋಮವಾರ ಭೇಟಿ ಮಾಡಿದರು.

1527ರಲ್ಲಿ ಪೋಪ್ ಏಳನೇ ಕ್ಲಮೆಂಟರನ್ನು ಜರ್ಮನ್ ಕೊಲೆಗಾರರಿಂದ ರಕ್ಷಿಸುವಾಗ ಮಾಡಿದ 147 ಸ್ವಿಸ್ ಗಾರ್ಡುಗಳ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಹಾಗೂ ಈ ದಿನದಂದು ನೂತನವಾಗಿ ಈ ಸೇನೆಗೆ ಸೇರ್ಪಡೆಯಾಗಿರುವ ಸದಸ್ಯರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಗುತ್ತದೆ.

ವ್ಯಾಟಿಕನ್ ನಗರಕ್ಕೆ ಹಾಗೂ ವಿಶ್ವಗುರುಗಳಿಗೆ ಈ ಸೇನೆಯು ನೀಡುವ ಅನುಪಮ ಸೇವೆ ಹಾಗೂ ಪರಿಶ್ರಮವನ್ನು ವಿಶ್ವಗುರು ಫ್ರಾನ್ಸಿಸ್ ಹೊಗಳಿ, ಕೊಂಡಾಡಿದರು. ಬದ್ಧತೆ, ಶಿಸ್ತು, ಹಾಗೂ ಕಟ್ಟುನಿಟ್ಟಿನ ಗಮನಾರ್ಹ ಸೇವೆಗೆ ಹೆಸರುವಾಸಿಯಾಗಿದೆ. ಇವರ ಬದ್ಧತೆ ಹಾಗೂ ಸೇವಾ ಮನೋಭಾವಕ್ಕೆ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದರು.

ಇದೇ ವೇಳೆ, ಮುಂದುವರೆದು ಮಾತನಾಡಿದ ಅವರು, ತಮ್ಮ ಸೇವೆಯಲ್ಲಿ ಹಾಗೂ ಜೀವನದಲ್ಲಿ ಮಾನವ ಸಂಬಂಧಗಳನ್ನು ಹೊಂದಿ, ಅವುಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು. ಯಾವ ಮನುಷ್ಯನು ಒಂಟಿಯಲ್ಲ. ಆದುದರಿಂದ, ಎಲ್ಲರೊಂದಿಗೆ ಜೀವಿಸುವ ಹಾಗೂ ಒಟ್ಟಾಗಿ ಬದುಕುವ ಸಮುದಾಯಿಕ ಜೀವನವನ್ನು ಸಹ ರೂಪಿಸಿಕೊಳ್ಳಬೇಕು ಎಂದು ವಿಶ್ವಗುರು ಫ್ರಾನ್ಸಿಸ್ ಹೊಸ ಸದಸ್ಯರಿಗೆ ಕಿವಿ ಮಾತನ್ನು ಹೇಳಿದರು.

ನೂತನವಾಗಿ ಸ್ವಿಸ್ ಗಾರ್ಡ್ ಸೇನೆಗೆ ಸೇರ್ಪಡೆಯಾದ 34 ಸದಸ್ಯರಲ್ಲಿ, 16 ಜನ ಜರ್ಮನ್ ಭಾಷಿಕರು, 16 ಜನ ಫ್ರೆಂಚ್ ಭಾಷಿಕರು ಹಾಗೂ ಇಬ್ಬರು ಇಟಾಲಿಯನ್ ಭಾಷೆಯನ್ನು ಮಾತನಾಡುವವರಿದ್ದಾರೆ. ಇವರ ಪ್ರತಿಜ್ಞಾವಿಧಿ ಕಾರ್ಯಕ್ರಮವು ಇಂದು ಸಂಜೆ 5:00 ಗಂಟೆಗೆ ವ್ಯಾಟಿಕನ್ನಿನ ಸೇಂಟ್ ದಮಾಸಸ್ ಕೋರ್ಟ್ಯಾರ್ಡ್ ನಲ್ಲಿ ನಡೆಯಲಿದೆ.

06 May 2024, 12:56