Celebrations ahead of Orthodox Easter in Kyiv Celebrations ahead of Orthodox Easter in Kyiv   (ANSA)

ಯುದ್ಧದ ನೆರಳಿನಲ್ಲಿ ಈಸ್ಟರ್ ಹಬ್ಬವನ್ನು ಆಚರಿಸಿದ ಉಕ್ರೇನ್

ಪೂರ್ವ ಉಕ್ರೇನ್ ಪ್ರಾಂತ್ಯದಲ್ಲಿ ರಷ್ಯಾ ಸೇನೆಯು ದಾಳಿ ನಡೆಸುತ್ತಿರುವ ಹೊತ್ತಲ್ಲೇ, ಉಕ್ರೇನ್ ದೇಶದಲ್ಲಿನ ಗ್ರೀಕ್ ಕಥೋಲಿಕರು ಈಸ್ಟರ್ ಹಬ್ಬವನ್ನು ಆಚರಿಸಿದ್ದಾರೆ. ಫೆಬ್ರವರಿ 2020ರಲ್ಲಿ ರಷ್ಯಾ ದೇಶವು ಉಕ್ರೇನ್ ದೇಶದ ಮೇಲೆ ದಾಳಿ ನಡೆಸಿದ ನಂತರ ಯುದ್ಧ ಸಮಯದಲ್ಲಿ ಉಕ್ರೇನ್ ದೇಶವು ಆಚರಿಸುತ್ತಿರುವ ಮೂರನೆಯ ಈಸ್ಟರ್ ಹಬ್ಬವು ಇದಾಗಿದೆ.

ವರದಿ: ಸ್ಟೆಫಾನ್ ಜೆ. ಬಾಸ್, ಅಜಯ್ ಕುಮಾರ್

ಜೂಲಿಯನ್ ಕ್ಯಾಲೆಂಡರ್ ಅನುಗುಣವಾಗಿ ಈಸ್ಟರ್ ಹಬ್ಬವನ್ನು ಆಚರಿಸುವ ಕಥೋಲಿಕರು ದೇಶದಾದ್ಯಂತ ಈ ಹಬ್ಬವನ್ನು ಆಚರಿಸುತ್ತಿದ್ದಾರೆ. ವಿನಾಶ ಹಾಗೂ ಸಾವುಗಳ ನಡುವೆಯೂ ಸಹ ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬವನ್ನು ಇವರು ಆಚರಿಸುತ್ತಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಯುದ್ಧವು ಮೂರನೇ ವರ್ಷಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ ಅಲ್ಲಿನ ಜನರು ತಮ್ಮ ಭರವಸೆಯನ್ನು ಶುಭ ಸಂದೇಶದ ಮೇಲೆ ಹಾಕಿ, ಈಸ್ಟರ್ ಹಬ್ಬವನ್ನು ಆಚರಿಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ನೂರಾರು ಜನರು ಕೀವ್ ನಗರದಲ್ಲಿನ ಸೈಂಟ್ ವಲೋಡಿಮಿರ್ ಕ್ಯಾಥೆಡ್ರಲ್ ದೇವಾಲಯದೊಳಗೆ ಬಲಿಪೂಜೆಯಲ್ಲಿ ಭಾಗವಹಿಸಲು ಹೋಗುತ್ತಿದ್ದು ಕಂಡು ಬಂತು.

ಎಲ್ಲಾ ಕಡೆಯೂ ಉಕ್ರೇನ್ ದೇಶದ ಸೈನಿಕರು ಈಸ್ಟರ್ ಹಬ್ಬದ ಹಿನ್ನೆಲೆ ಆಶೀರ್ವಾದಗಳನ್ನು ಪಡೆದರು. ಇದೇ ಹೊತ್ತಿನಲ್ಲಿ ಅವರು ಯುದ್ಧಭೂಮಿಯಲ್ಲಿ ಹೋರಾಡಲಿದ್ದಾರೆ.

ಸೈಂಟ್ ವಲೋಡಿಮಿರ್ ಕ್ಯಾಥೆಡ್ರಲ್ ದೇವಾಲಯದಲ್ಲಿ ಒಟ್ಟಾಗಿ ಸೇರಿ ಪ್ರಾರ್ಥಿಸಿದ ಜನರು, ದೇಶದಲ್ಲಿ ಶಾಂತಿ ನೆಲೆಸುವಂತೆ ವಿಶೇಷ ಪ್ರಾರ್ಥನೆಗಳನ್ನು ಕೈಗೊಂಡರು.

ಈ ದೇಶದ ಕಥೋಲಿಕರ ಮಹಾಧರ್ಮ ಅಧ್ಯಕ್ಷರು ಮಾತನಾಡಿ ಪ್ರತಿದಿನ ಯುದ್ಧದ ಕಾರಣದಿಂದ ಸುಮಾರು 200 ಜನ ಸೈನಿಕರು ಸಾವನ್ನಪ್ಪುತ್ತಿದ್ದಾರೆ. ಇದರ ಜೊತೆಗೆ ಹಲವರು ಗಾಯಗೊಳ್ಳುತ್ತಿದ್ದಾರೆ. ಮೃತ ಹೊಂದಿದ ತನ್ನ ಗಂಡನ ಸಮಾಧಿಯ ಮೇಲೆ ವಿಧವೆಯು ಅಳುವ ದೃಶ್ಯವು ಹೃದಯವಿದ್ರಾವಕವಾಗಿದೆ. ಯುದ್ಧದ ಕಾರಣದಿಂದ ಕೈಕಾಲುಗಳನ್ನು ಕಳೆದುಕೊಂಡು ಆಸ್ಪತ್ರೆಯ ಹಾಸಿಗೆಯಲ್ಲಿರುವ ಯುವ ಸೈನಿಕರನ್ನು ನೋಡಿದಾಗಲೆಲ್ಲ ಪ್ರಭುವೇ ಇವು ನಿನ್ನ ಗಾಯಗಳು ಎಂದು ನಾನು ಉದ್ಗರಿಸುತ್ತೇನೆ ಎಂದು ಅವರು ಹೇಳಿದರು.

ಇವೆಲ್ಲ ಸಂಕಷ್ಟಗಳ ನಡುವೆಯೂ ಕೀವ್ ನಗರದಲ್ಲಿ ಜನರು ಭರವಸೆಯಿಂದ ಬದುಕುತ್ತಿದ್ದು, ಒಂದಲ್ಲ ಒಂದು ದಿನ ಯುದ್ಧವು ಮುಗಿಯುತ್ತದೆ, ಶಾಂತಿ ನೆಲೆಸುತ್ತದೆ ಎಂದು ಆಶಾದಾಯಕವಾಗಿದ್ದಾರೆ.

06 May 2024, 10:43