ವ್ಯಾಟಿಕನ್ನಿನಲ್ಲಿ ಮುಂದುವರೆದ ಕಾರ್ಡಿನಲ್ ಕೌನ್ಸಿಲ್ ಸಭೆ
ವರದಿ: ವ್ಯಾಟಿಕನ್ ನ್ಯೂಸ್
ಸೋಮವಾರ ಪೋಪ್ ಫ್ರಾನ್ಸಿಸ್ ಅವರ ಉಪಸ್ಥಿತಿಯಲ್ಲಿ ಸಿ9 ಎಂದು ಕರೆಯಲ್ಪಡುವ ಕಾರ್ಡಿನಲ್ಲುಗಳ ಸಮಿತಿಯ ಸಭೆಯು ವ್ಯಾಟಿಕನ್ ನಗರದಲ್ಲಿ ಮುಂದುವರೆದಿದೆ.
ರೋಮನ್ ಕ್ಯೂರಿಯಾ ಹಾಗೂ ಧರ್ಮಸಭೆಯ ಆಡಳಿತವನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ಸಮಿತಿಯನ್ನು ೨೦೧೯ ರಲ್ಲಿ ಸ್ಥಾಪಿಸಿದ್ದರು. ಈ ವಾರದ ಸಭೆಯು ಈ ವರ್ಷದಲ್ಲಿ ನಡೆಸಿದ ಮೂರನೇ ಸಭೆಯಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಈ ಸಮಿತಿಯ ಸಭೆಯು ಪ್ರೇಷಿತ ಸಂವಿಧಾನವಾದ "ಪ್ರೆಡಿಕಾತೆ ಇವ್ಯಾಂಜೆಲಿಯುಮ್" ಅನ್ನು ವಿಶ್ವ ಧರ್ಮಸಭೆಯಾದ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ನಿರ್ಧಾರವನ್ನು ಕೈಗೊಂಡಿತ್ತು.
ಇನ್ನುಳಿದ ಸಭೆಗಳಲ್ಲಿ ಈ ಕಾರ್ಡಿನಲ್ಲುಗಳ ಸಭೆಯು "ಧರ್ಮಸಭೆಯಲ್ಲಿ ಮಹಿಳೆಯರ ಪಾತ್ರ" ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಚರ್ಚಿಸಿದೆ.
ಪ್ರಸ್ತುತ ಇರುವ ಸಿ9 ಕಾರ್ಡಿನಲ್ಲುಗಳ ಸಮಿತಿಯಲ್ಲಿ ವ್ಕಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪರೋಲಿನ್, ವ್ಯಾಟಿಕನ್ ನಗರ ರಾಜ್ಯದ ಪೊಂಟಿಫಿಕಲ್ ಆಯೋಗದ ಅಧ್ಯಕ್ಷ ಕಾರ್ಡಿನಲ್ ಫರ್ನಾಂಡೊ ವೆರ್ಜೆಝ್ ಅಲ್ಝಾಗ, ಕಿನ್ಷಾಸಾದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಫ್ರಿಡೋಲಿನ್ ಅಂಬೋಂಗೋ ಬೊಸುಂಗು, ಬಾಂಬೆ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಓಸ್ವಾಲ್ಡ್ ಗ್ರೇಷಿಯಸ್, ಬೊಸ್ಟನ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಪ್ಯಾಟ್ರಿಕ್ ಸಿಯನ್ ಒಮಾಲ್ಲೀ, ಬಾರ್ಸಲೋನಾದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಹುವಾನ್ ಹೊಸೆ ಒಮೆಲ್ಲಾ, ಕೆಬೆಕ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಜೆರಾಲ್ಡ್ ಲಾಕ್ರೋಯ್, ಲುಕ್ಸೆಂಬರ್ಗ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಜಿಯನ್-ಕ್ಲಾಡ್ ಹೊಲ್ಲೆರಿಚ್, ಹಾಗೂ ಸ್ಯಾನ್ ಸಾಲ್ವತೋರ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಕಾರ್ಡಿನಲ್ ಸೆರ್ಜಿಯೋ ಡ ರೋಚ ಅವರು ಇದ್ದಾರೆ. ಈ ಸಮಿತಿಯ ಕಾರ್ಯದರ್ಶಿಯಾಗಿ ಕ್ರೆಸೀಮಾದ ಟೈಟ್ಯುಲರ್ ಧರ್ಮಾಧ್ಯಕ್ಷರಾದ ಬಿಷಪ್ ಮಾರ್ಕೋ ಮೆಲಿನೋ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.