ಪೋಪ್: ಸಂವಾದವನ್ನು ಉತ್ತೇಜಿಸಿ; ಯುದ್ಧದ ಸಂತ್ರಸ್ತರನ್ನು ರಕ್ಷಿಸಿ
ವರದಿ: ಒಸ್ಸರ್ವತೊರೆ ರೋಮಾನೋ
ಪೊಂಟಿಫಿಕಲ್ ಎಕ್ಲಿಸಿಯಾಸ್ಟಿಕಲ್ ಅಕಾಡೆಮಿಯ ಅಧ್ಯಕ್ಷ ಆರ್ಚ್ ಬಿಷಪ್ ಸಾಲ್ವತೋರ್ ಪೆನ್ನಾಕಿಯೋ ಅವರು ತಮ್ಮ ವಿದ್ಯಾರ್ಥಿಗಳನ್ನು ವಿಶ್ವಗುರು ಫ್ರಾನ್ಸಿಸ್ ಅವರಿಗೆ ಪರಿಚಯಿಸಿದರು. ಈ ವಿದ್ಯಾರ್ಥಿಗಳಲ್ಲಿ 14 ಜನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಮ್ಮ ಮಿಷನರಿ ವರ್ಷಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಿದರು.
ಈ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಈ ಅಕಾಡೆಮಿಯ ಹಿಂದಿನ ಅಧ್ಯಕ್ಷರಾಗಿದ್ದ ಮೊನ್ಸಿಜ್ಞೋರ್ ಜೋಸೆಫ್ ಮರೀನೊ ಅವರನ್ನು ನೆನಪಿಸಿಕೊಂಡರು. ನೀವು ರಾಜ ತಾಂತ್ರಿಕ ಅಧಿಕಾರಿಗಳಾಗಿ ಹೊರಡುವ ಮುನ್ನ ಎಂದಿಗೂ ವಿಶ್ವಗುರು ಆರನೇ ಪೌಲರ ಪ್ರೇಷಿತ ಪತ್ರ "ಇವ್ಯಾಂಜೆಲಿ ನುಂಟಿಯಾಂಡಿ" ಯಲ್ಲಿ ಬರೆದಿರುವ ಅಂಶಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಅವು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ರಾಜ ತಾಂತ್ರಿಕ ಕಾರ್ಯಗಳನ್ನು ಮಾಡುವ ಮುನ್ನ ನೀವು ಗುರುಗಳಾಗಿದ್ದೀರಿ ಎಂಬುದನ್ನು ಮರೆಯಬಾರದು. ಗುರುಗಳ ಪ್ರಧಾನ ಆದ್ಯತೆ ಪಾಲನಾ ಸೇವೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ನೀವೆಲ್ಲರೂ ಕ್ಷಮಿಸುವ ಗುರುಗಳಾಗಿ ಭಕ್ತಾದಿಗಳನ್ನು ಪ್ರಭುವಿನ ಕಡೆಗೆ ಕರೆದೊಯ್ಯಬೇಕು. ಇದಕ್ಕೆ ಯೇಸುವಿನ ಪವಿತ್ರ ಹೃದಯವು ನಿಮಗೆ ಮಾದರಿಯಾಗಿರಬೇಕು ಎಂದು ಹೇಳಿದರು.