ಗಾಝಾಕ್ಕೆ ತ್ವರಿತ ನೆರವು ನೀಡುವಂತೆ ಪೋಪ್ ಫ್ರಾನ್ಸಿಸ್ ಮನವಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಯುದ್ಧದಿಂದ ಭೀಕರವಾಗಿ ನರಳುತ್ತಿರುವ ಪ್ಯಾಲೆಸ್ತೇನಿನ ಗಾಝಾ ಪ್ರದೇಶದ ಕುರಿತು ಮತ್ತೊಮ್ಮೆ ಮಾತನಾಡಿದ್ದಾರೆ. ಈ ಪ್ರದೇಶದಲ್ಲಿ ಬಳಲುತ್ತಿರುವ ಜನತೆಯ ಸಂಕಷ್ಟಕ್ಕೆ ಮಿಡಿದಿರುವ ಅವರು ಈ ಪ್ರದೇಶಕ್ಕೆ ಅತ್ಯಂತ ತ್ವರಿತವಾಗಿ ಮಾನವೀಯ ನೆರವನ್ನು ನೀಡುವಂತೆ ದೇಶಗಳಿಗೆ ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಜೋರ್ಡನ್ ದೇಶವು ಗಾಝಾ ಪ್ರದೇಶಕ್ಕೆ ಮಾನವೀಯ ನೆರವನ್ನು ನೀಡುವ ಕುರಿತು ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಿದೆ. ಈ ಸಭೆಯ ಕುರಿತು ಗಮನವನ್ನು ಸೆಳೆದಿರುವ ಪೋಪ್ ಫ್ರಾನ್ಸಿಸ್ ಅವರು ಈ ಸಭೆಯನ್ನು ಬಹುಮುಖ್ಯ ಸಭೆ ಎಂದು ಘೋಷಿಸಿ, ಇದಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ಶಾಂತಿ ಸ್ಥಾಪನೆಯ ಮಹತ್ವದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಅದೇ ಹೊತ್ತಿನಲ್ಲಿ ಶಾಂತಿ ಸ್ಥಾಪನೆ ಸುಲಭವಲ್ಲ; ಬದಲಿಗೆ ಇದಕ್ಕೆ ಪದೇ ಪದೇ ಪ್ರಯತ್ನಗಳನ್ನು ಹಾಗೂ ಪರಿಶ್ರಮವನ್ನು ಹಾಕಬೇಕು ಎಂದು ಹೇಳಿದ್ದಾರೆ.
ಇದೇ ಸಂಧರ್ಭದಲ್ಲಿ ಅವರು ಯುದ್ಧದಿಂದ ಬಳಲುತ್ತಿರುವ ಉಕ್ರೇನ್ ಹಾಗೂ ಮ್ಯಾನ್ಮಾರ್ ದೇಶವನ್ನು ನೆನಪಿಸಿಕೊಂಡಿದ್ದಾರೆ. ಇಲ್ಲಿಯೂ ಸಹ ದಿನೇ ದಿನೇ ಯುದ್ಧದ ಕಾರಣಕ್ಕೆ ಮಕ್ಕಳೂ ಸೇರಿದಂತೆ ನೂರಾರು ಮುಗ್ಧ ಜನರು ಅಸುನೀಗುತ್ತಿದ್ದು, ಇದಕ್ಕೆ ಕೊನೆ ಹಾಡಬೇಕಿದೆ ಎಂದು ಹೇಳಿದರು.