Pope Francis meets Plenary of the Dicastery for the Clergy Pope Francis meets Plenary of the Dicastery for the Clergy  (ANSA)

ಪೋಪ್: ಗುರುಗಳು ಒಬ್ಬಂಟಿಯಾಗಿ ನಡೆಯಬಾರದು

ಪವಿತ್ರ ಪೀಠದ ಗುರುಗಳ ಆಯೋಗದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು ಗುರುಗಳು ಒಬ್ಬಂಟಿಯಾಗಿ ಎಂದಿಗೂ ನಡೆಯಬಾರದು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ದೈವಕರೆ, ಗುರುಗಳ ತರಬೇತಿ ಹಾಗೂ ಶಾಶ್ವತ ಸೇವಾದಶಿತನದ ಕುರಿತು ಮಾತನಾಡಿದ್ದಾರೆ.

ವರದಿ: ಏಡ್ರಿಯಾನ ಮಸೊಟ್ಟಿ, ಅಜಯ್ ಕುಮಾರ್

ಗುರುವಾರ ಬೆಳಿಗ್ಗೆ ವಿಶ್ವಗುರು ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ನಡೆಯುತ್ತಿರುವ ಗುರುಗಳ ಆಯೋಗದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಭೆಯಲ್ಲಿ ಭಾಗವಹಿಸಿದ ಗುರುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೈವಕರೆ, ಗುರುಗಳ ತರಬೇತಿ ಹಾಗೂ ಶಾಶ್ವತ ಸೇವಾದರ್ಶಿತ್ವದ ಕುರಿತು ಬೆಳಕನ್ನು ಚೆಲ್ಲಿದರು.

ಮುಂದುವರೆದು ಮಾತನಾಡಿದ ಅವರು "ಗುರುಗಳಾದ ನಾವೆಲ್ಲರೂ ಒಂದು ಸೋದರ ಬಾಂಧವ್ಯದ ಸಮುದಾಯದಲ್ಲಿ ಬೆಳೆಯಬೇಕು. ಏಕೆಂದರೆ ಗುರುಗಳಾಗಿ ನಾವು ಎಂದಿಗೂ ಒಬ್ಬಂಟಿಗಳಾಗಿ ನಡೆಯಬಾರದು. ನಮ್ಮ ಬದುಕಿನ ಪಯಣದಲ್ಲಿ ಯಾವಾಗಲೂ ನಾವು ಜನರೊಂದಿಗೆ ಅಥವಾ ವ್ಯಕ್ತಿಗಳೊಂದಿಗೆ ಮುನ್ನಡೆಯಬೇಕು" ಎಂದು ಹೇಳಿದ್ದಾರೆ. ಕಷ್ಟ ಸಂಕಷ್ಟಗಳನ್ನು ಅನುಭವಿಸಿದ ಹೊರತಾಗಿಯೂ ಬದ್ಧತೆಯಿಂದ ಧರ್ಮಸಭೆಗೆ ಸೇವೆ ಸಲ್ಲಿಸುತ್ತಿರುವ ಗುರುಗಳಿಗೆ ವಿಶ್ವಗುರು ಫ್ರಾನ್ಸಿಸ್ ಧನ್ಯವಾದಗಳು ತಿಳಿಸಿದರು.

"ನಾನು ಈಗಾಗಲೇ ಕ್ಲೇರಿಕಾಲಿಸಂ ಅಥವಾ ಯಾಜಕತ್ವದ ಅಹಂ ಕುರಿತು ಮಾತನಾಡಿದ್ದೇನೆ. ಆದರೆ ಬಹುತೇಕ ಗುರುಗಳು ಅನೇಕ ಕಷ್ಟ ಸಂಕಷ್ಟಗಳನ್ನು ಎದುರಿಸುತ್ತಾ, ಭಾರವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು, ಧರ್ಮಸಭೆಗೆ ಹಾಗೂ ಧರ್ಮಸಭೆಯ ಭಕ್ತವಿಶ್ವಾಸಿಗಳಿಗೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪಾಲನ ಹಾಗೂ ಆಧ್ಯಾತ್ಮಿಕ ದುಗುಡಗಳ ಹೊರತಾಗಿಯೂ ಅವರು ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ." ಎಂದು ಹೇಳುವ ಮೂಲಕ ವಿಶ್ವಗುರು ಫ್ರಾನ್ಸಿಸ್ ಗುರುಗಳ ಬದ್ಧತೆಯನ್ನು ಶ್ಲಾಘಿಸಿದರು.

ಮುಂದುವರೆದು ಮಾತನಾಡಿದ ಅವರು "ಗುರುಗಳಾದ ನಾವು ಭಕ್ತ ವಿಶ್ವಾಸಿಗಳ ಜೊತೆ ಬೆರೆತು ಮುಂದುವರೆಯಬೇಕೆ ಹೊರತು, ನಾವು ಒಬ್ಬಂಟಿಗಳಾಗಬಾರದು. ನಮ್ಮ ಬದುಕಿನಲ್ಲಿ ಒಬ್ಬಂಟಿತನಕ್ಕೆ ಅಥವಾ ಒಂಟಿತನಕ್ಕೆ ನಾವು ಆಸ್ಪದವನ್ನು ನೀಡಬಾರದು" ಎಂದು ಹೇಳಿದ್ದಾರೆ.

06 June 2024, 18:36