ನೀವು ಪ್ರಭುವಿನ ಸಾಧನವಾಗಿದ್ದೀರಿ: ಧಾರ್ಮಿಕ ಭಗಿನಿಯರಿಗೆ ಪೋಪ್ ಫ್ರಾನ್ಸಿಸ್
ವರದಿ: ಡೆಬೋರಾ ಕ್ಯಾಸ್ಟಲಿನೊ ಲುಬೋವ್, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸ್ ಅವರು ಸಿಸ್ಟರ್ಸ್ ಆಫ್ ಸೈಂಟ್ ಫೆಲಿಕ್ಸ್ ಆಫ್ ಕ್ಯಾಂಟಲೀಸ್ ಹಾಗೂ ಡಾಟರ್ಸ್ ಆಫ್ ಅವರ್ ಲೇಡಿ ಆಫ್ ಮರ್ಸಿ ಧಾರ್ಮಿಕ ಸಭೆಯ ಕನ್ಯಾಸ್ತ್ರಿಯರಿಗೆ ಅವರ ಸರ್ವಸ್ವವನ್ನು ಪ್ರಭುವಿಗೆ ಸಮರ್ಪಿಸುವ ಮೂಲಕ, ಉದಾರತೆಯಲ್ಲಿ ಬದುಕುವಂತೆ ಪ್ರೇರೇಪಿಸಿದ್ದಾರೆ.
ತಮ್ಮ ವಾರ್ಷಿಕ ಸಭೆಗಳ ಹಿನ್ನೆಲೆಯಲ್ಲಿ ವ್ಯಾಟಿಕನ್ ನಗರಕ್ಕೆ ಆಗಮಿಸಿದ ಸಿಸ್ಟರ್ಸ್ ಆಫ್ ಸೈಂಟ್ ಫೆಲಿಕ್ಸ್ ಆಫ್ ಕ್ಯಾಂಟಲೀಸ್ ಹಾಗೂ ಡಾಟರ್ಸ್ ಆಫ್ ಅವರ್ ಲೇಡಿ ಆಫ್ ಮರ್ಸಿ ಧಾರ್ಮಿಕ ಸಭೆಯ ಕನ್ಯಾಸ್ತ್ರಿಯರನ್ನು ಭೇಟಿ ಮಾಡಿದ ವಿಶ್ವಗುರು ಫ್ರಾನ್ಸಿಸ್, ನಾವೆಲ್ಲರೂ ದೇವರ ಕರಗಳಲ್ಲಿ ಸಾಧನವಾಗಿದ್ದೇವೆ. ಇದನ್ನು ನಾವು ಎಂದಿಗೂ ಮರೆಯಬಾರದು ಎಂದು ಹೇಳಿದ್ದಾರೆ.
ನಿಮ್ಮ ಧಾರ್ಮಿಕ ಸಭೆಗಳು 19ನೇ ಶತಮಾನದಲ್ಲಿ ಸ್ಥಾಪಿಸಲ್ಪಟ್ಟಿದ್ದರು ಸಹ ನಿಮ್ಮ ಮೂಲ ಗುರಿ ಸೇವೆ ಮಾಡುವುದಾಗಿದೆ. 19ನೇ ಶತಮಾನದ ವಿವಿಧ ಕಾಲಘಟ್ಟಗಳಲ್ಲಿ ಆಯಾ ಸನ್ನಿವೇಶಕ್ಕೆ ತಕ್ಕಂತೆ ಸಮಾಜದಲ್ಲಿ ನೀವು ಸೇವೆಯನ್ನು ಮಾಡಿದ್ದೀರಿ. ಅದೇ ರೀತಿ ಇಂದಿನ ಸಮಾಜಕ್ಕೂ ಸಹ ನಿಮ್ಮ ಸೇವೆಯ ಅಗತ್ಯವಿದೆ ಎಂದು ವಿಶ್ವಗುರು ಫ್ರಾನ್ಸಿಸ್ ಈ ಧಾರ್ಮಿಕ ಸಭೆಗಳ ಕನ್ಯಾ ಸ್ತ್ರೀಯರಿಗೆ ಕಿವಿ ಮಾತನ್ನು ಹೇಳಿದರು.
ಮುಂದುವರೆದು ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ದೇವರು ನಿಮ್ಮ ಮೂಲಕವೂ ಸಹ ಕಾರ್ಯನಿರ್ವಹಿಸುತ್ತಾರೆ. ನಾವು ಕೊಡುವ ಒಂದೇ ಒಂದು ಉತ್ತರಕ್ಕಾಗಿ ಅವರು ಕಾಯುತ್ತಿದ್ದಾರೆ ಎಂದು ಹೇಳಿದರು.