ಗಾಜಾ ಹಾಗೂ ಉಕ್ರೇನ್ ದೇಶದಲ್ಲಿ ಹೆಚ್ಚುತ್ತಿರುವ ಹಿಂಸೆಯಿಂದ ಅಸಮಾಧಾನಿತರಾದ ಪೋಪ್ ಫ್ರಾನ್ಸಿಸ್

ಕೀವ್ ನಗರದ ಮೇಲಿನ ಮೆಡಿಕಲ್ ಸೆಂಟರ್ ಹಾಗೂ ಗಾಜಾದ ಶಾಲೆಯೊಂದರ ಮೇಲೆ ನಡೆದಂತಹ ರಾಕೆಟ್ ದಾಳಿಯ ಕುರಿತು ಪೋಪ್ ಫ್ರಾನ್ಸಿಸ್ ಅವರು ಅರಿತುಕೊಂಡರು. ಈ ಸಮಯದಲ್ಲಿ ಹೆಚ್ಚುತ್ತಿರುವ ಹಿಂಸೆಯ ಕಾರಣದಿಂದಾಗಿ ಅವರು ತಮ್ಮ ಬೇಸರವನ್ನು ಹಾಗೂ ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಜುಲೈ ತಿಂಗಳಲ್ಲಿ ತಮ್ಮ ವಾರ್ಷಿಕ ವಿಶ್ರಾಂತಿ ಸಮಯವನ್ನು ತೆಗೆದುಕೊಳ್ಳುವುದು ವಾಡಿಕೆ. ಹೀಗೆ ಅವರು ತಮ್ಮ ವಿಶ್ರಾಂತಿಯಲ್ಲಿರುವ ಸಂದರ್ಭದಲ್ಲಿ ಹೆಚ್ಚುತ್ತಿರುವ ಯುದ್ಧ ಕಾಲದ ಹಿಂಸೆಯ ಕಾರಣ ತಮ್ಮ ನೋವನ್ನು ಹಾಗೂ ಕಳವಳವನ್ನು ವ್ಯಕ್ತಪಡಿಸಿದ್ದಾರೆ. 

ಇತ್ತೀಚೆಗಷ್ಟೇ ಕೀವ್ ನಗರದ ಮೆಡಿಕಲ್ ಸೆಂಟರ್ ಮೇಲೆ ರಷ್ಯಾ ದಾಳಿ ನಡೆಸಿದ ವಿಷಯ ಹಾಗೂ ಇಸ್ರೇಲ್ ಗಾಜಾದ ಶಾಲೆಯೊಂದರ ಮೇಲೆ ನಡೆಸಿದ ದಾಳಿಯ ಕುರಿತು ಅರಿತುಕೊಂಡ ಪೋಪ್ ಫ್ರಾನ್ಸಿಸ್ ಅವರು ತಮ್ಮ ಬೇಸರ ಹಾಗೂ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಈ ಎರಡೂ ದಾಳಿಗಳಲ್ಲಿ ನೋವನ್ನು ಅನುಭವಿಸಿದ ಹಾಗೂ ಮೃತರಾದ ಎಲ್ಲರೊಂದಿಗೆ ತಮ್ಮ ಐಕ್ಯಮತ್ಯವನ್ನು ಸಾಧಿಸಿರುವ ಅವರು, ಮಡಿದವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ನೋವನ್ನು ಅನುಭವಿಸುತ್ತಿರುವವರಿಗೆ ಪ್ರಾರ್ಥನೆ ಹಾಗೂ ಭರವಸೆಯನ್ನು ನೀಡಿದ್ದಾರೆ. ಇನ್ನು ಮುಂದಾದರೂ ಯುದ್ಧದ ಕೆಡುಕುಗಳನ್ನು ಅರಿತುಕೊಂಡು ಎಲ್ಲಾ ಪಕ್ಷಗಳು ಹಾಗೂ ವ್ಯಕ್ತಿಗಳು ಯುದ್ಧವನ್ನು ನಿಲ್ಲಿಸಬೇಕು ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.     

09 July 2024, 15:43