ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್: ಬದುಕಿನ ವೇಗವನ್ನು ತುಸು ಕಡಿಮೆ ಮಾಡಿ, ಕಾರುಣ್ಯವುಳ್ಳವರಾಗಿರಿ
ವರದಿ: ತದ್ದೆಯೂಸ್ ಜೋನ್ಸ್, ಅಜಯ್ ಕುಮಾರ್
ಭಾನುವಾರದ ತ್ರಿಕಾಲ ಪ್ರಾರ್ಥನೆಯನ್ನು ನೆರವೇರಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ನಾವೆಲ್ಲರೂ ನಮ್ಮ ಬದುಕಿನ ವೇಗವನ್ನು ಸ್ವಲ್ಪ ತಗ್ಗಿಸಿ, ಕಾರುಣ್ಯವುಳ್ಳವರಾಗಿರಬೇಕೆಂದು ಕರೆ ನೀಡಿದ್ದಾರೆ.
ನಮ್ಮ ವೇಗದ ಬದುಕಿನಲ್ಲಿ ನಾವು ಅನುಭವಿಸುತ್ತಿರುವ ಚಿಂತೆ ಹಾಗೂ ಹತಾಶೆಗಳನ್ನು ಒಮ್ಮೆ ಬದಿಗೊತ್ತಿ ಪ್ರಾರ್ಥನೆ ಹಾಗೂ ಧ್ಯಾನದಲ್ಲಿ ಸಮಯವನ್ನು ಕಳೆಯುವಂತೆ ಹಾಗೂ ಆ ಮೂಲಕ ಬದುಕಿನ ನಿಜವಾದ ಅರ್ಥವನ್ನು ಕಂಡುಕೊಳ್ಳುವಂತೆ ವಿಶ್ವಗುರು ಫ್ರಾನ್ಸಿಸರು ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಎಲ್ಲಾ ಭಕ್ತಾಧಿಗಳಿಗೆ ಕರೆ ನೀಡಿದ್ದಾರೆ.
ನಮ್ಮ ಪ್ರೇಷಿತ ಸೇವೆಯು ಕೆಲವೊಮ್ಮೆ ನಮ್ಮಿಂದ ಹೆಚ್ಚಿನದನ್ನು ಬೇಡುತ್ತದೆ. ಈ ರೀತಿಯ ಹೆಚ್ಚಿನದ್ದನ್ನು ನಾವು ಮಾಡುವಾಗ ಸುಸ್ತಾಗುತ್ತೇವೆ. ಇಂತಹ ಸಮಯ ಹಾಗೂ ಸನ್ನಿವೇಷಗಳಲ್ಲಿ ನಾವು ಪ್ರಾರ್ಥನೆಯಲ್ಲಿ ಹಾಗೂ ಧ್ಯಾನದಲ್ಲಿ ಸಮಯವನ್ನು ಕಳೆದು, ದೇವರ ಮೂಲಕ ನಮ್ಮ ಹಾದಿಯನ್ನು ಮತ್ತೆ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಕುಟುಂಬಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ನಾವೆಲ್ಲರೂ ನಮ್ಮದೇ ಕಾರ್ಯಗಳಲ್ಲಿ ಮುಳುಗಿ ಹೋಗಿರುವ ಕಾರಣ ನಮ್ಮ ಕುಟುಂಬಗಳಿಗೆ ಸಮಯವನ್ನು ನೀಡಲು ಸಾಧ್ಯವಾಗುತ್ತಿಲ್ಲ. ಇವೆಲ್ಲವನ್ನು ನಾವು ನಮ್ಮ ಪ್ರಾಪಂಚಿಕ ಕಾರ್ಯಗಳನ್ನು ಕೊಂಚ ಕಾಲ ನಿಲ್ಲಿಸಿ, ಆಧ್ಯಾತ್ಮಿಕವಾಗಿ ಸರಿದೂಗಿಸಬೇಕಿದೆ ಎಂದು ಅವರು ಹೇಳಿದರು.