ಶ್ರೀಮಂತ ದೇಶಗಳು ದ್ವೀಪ ರಾಜ್ಯಗಳಿಗೆ ಸಾಲಭಾದೆಯಿಂದ ಮುಕ್ತವಾಗಲು ನೆರವು ನೀಡಬೇಕು: ವ್ಯಾಟಿಕನ್ ಪೀಠ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್
ಶ್ರೀಮಂತ ರಾಷ್ಟ್ರಗಳು ದ್ವೀಪ ರಾಷ್ಟ್ರಗಳಿಗೆ ಸಾಲಭಾದೆಯಿಂದ ಹೊರಬರಲು ನೆರವು ನೀಡಬೇಕು ಎಂದು ವ್ಯಾಟಿಕನ್ ಪೀಠವು ಒತ್ತಾಯಿಸಿದೆ. ಆರ್ಚ್'ಬಿಷಪ್ ಗ್ಯಾಬ್ರಿಯೇಲ್ ಕಾಚಿಯಾ ಅವರು ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಮಾತನಾಡುತ್ತಾ, ಈ ಕುರಿತು ಪೋಪ್ ಫ್ರಾನ್ಸಿಸ್ ಅವರ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕಳೆದ ಸಭೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಹೇಳಿದ ಮಾತುಗಳು ಇಂತಿವೆ:
ಸಾಲ ಸಂಘರ್ಷ ಹಾಗೂ ಅದರ ಪರಿಣಾಮಗಳ ಕುರಿತು ಮಾತನಾಡಿದ ಅವರು, ಕೊರೊನಾ ಸಂಕ್ರಮಿಕ ಹಾಗೂ ಪ್ರಸ್ತುತ ಯುದ್ಧಗಳ ಹೊರತಾಗಿ ನಾವು ನೋಡುತ್ತಿರುವ ಅತ್ಯಂತ ದೊಡ್ಡ ಸಮಸ್ಯೆ ಎಂದರೆ ಅದು ಸಾಲ. ದಿನೇ ದಿನೇ ಹೆಚ್ಚುತ್ತಿರುವ ಅಧಿಕ ಮೊತ್ತದ ಸಾಲಗಳಿಂದ ಗ್ಲೋಬಲ್ ಸೌತ್ ನಲ್ಲಿರುವ ದೇಶಗಳಿಗೆ ಇದು ಅತ್ಯಂತ ದೊಡ್ಡ ಹೊರೆಯಾಗಿದ್ದು, ಇದರಿಂದ ಹೊರಬರಲಾರದ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದರು.
ಇದು ಲಕ್ಷಾಂತರ ಜನರು ಉತ್ತಮ ಭವಿಷ್ಯವನ್ನು ಹೊಂದುವುದನ್ನು ತಡೆಗಟ್ಟುತ್ತದೆ ಎಂದು ಹೇಳಿದರು.
ಇದನ್ನು ಹೇಗೆ ಪರಿಹರಿಸಬಹುದು ಎಂಬ ಕುರಿತು ಚಿಂತನೆಯನ್ನು ನಡೆಸಿದ ವಿಶ್ವಗುರು ಫ್ರಾನ್ಸಿಸ್, ಸಾಲ ಸಮಸ್ಯೆ ಎಂಬುದನ್ನು ಬಗೆಹರಿಸಲು ವಿಶ್ವದ ವಿವಿಧ ದೇಶಗಳು ಧೈರ್ಯಾತ್ಮಕ ಹಾಗೂ ಕ್ರಿಯಾಶೀಲ ಹೆಜ್ಜೆಗಳನ್ನು ಇಡಬೇಕು. ಇದಕ್ಕಾಗಿ ನೂತನ ಆರ್ಥಿಕ ಸಂರಚನೆಗಳನ್ನು ಒಳಗೊಂಡು, ಎಲ್ಲರಿಗೂ ಸೂಕ್ತವಾದ ಹಾಗೂ ಉತ್ತಮವಾದ ಭವಿಷ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಜುಬಿಲಿ ವರ್ಷದಲ್ಲಿ ಸಾಲಗಳನ್ನು ರದ್ದು ಪಡಿಸುವ ಕುರಿತು ಮಾತನಾಡಿದ್ದಾರೆ.