ಇಥಿಯೋಪಿಯಾ ಭೂಕುಸಿತಕ್ಕೆ ಮರುಗಿದ ಪೋಪ್; ಯುದ್ಧ ನಿಲ್ಲಿಸಲು ಮತ್ತೆ ಮನವಿ
ವರದಿ: ವ್ಯಾಟಿಕನ್ ನ್ಯೂಸ್
ಮೊನ್ನೆ ಇಥಿಯೋಪಿಯಾ ದೇಶದಲ್ಲಿ ನಡೆದ ಭೂಕುಸಿತದಲ್ಲಿ ಸುಮಾರು ಐನೂರು ಜನರು ಮೃತರಾದರು. ಈ ಕುರಿತು ತಮ್ಮ ಶೋಕವನ್ನು ಪೋಪ್ ಫ್ರಾನ್ಸಿಸ್ ಅವರು ವ್ಯಕ್ತಪಡಿಸಿದ್ದಾರೆ ಹಾಗೂ ಮೃತರ ಕುಟುಂಬಗಳಿಗೆ ಪ್ರಾರ್ಥನೆಯ ಭರವಸೆಯನ್ನು ನೀಡಿ, ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ಯುದ್ಧವನ್ನು ವಿನಾಶ ಎಂದು ಕರೆದಿದ್ದಾರೆ.
ಯುದ್ಧ ಎಂದಿಗೂ ಸೋಲೇ ಎಂದು ಮತ್ತೊಮ್ಮೆ ಪೋಪ್ ಫ್ರಾನ್ಸಿಸ್ ಪುನರುಚ್ಛರಿಸಿದ್ದಾರೆ. ಯುದ್ಧದ ಕಾರಣದಿಂದಲೇ ಜಗತ್ತಿನಲ್ಲಿ ಅಪಾರ ಸಾವು-ನೋವುಗಳು ಸಂಭವಿಸುತ್ತಿವೆ. ಇವೆಲ್ಲವೂ ಮಾನವ ನಿರ್ಮಿತ ಹಿಂಸೆಯಾಗಿದ್ದು, ಇದು ನಿಲ್ಲಬೇಕಿದೆ ಎಂದು ಹೇಳುತ್ತಾ ಶಾಂತಿಯ ಕುರಿತು ತಮ್ಮ ಮನವಿಯನ್ನು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.
ಅಜ್ಜ-ಅಜ್ಜಿಯರ ದಿನಾಚರಣೆ; ಪೋಪ್ ಫ್ರಾನ್ಸಿಸ್ ಶ್ಲಾಘನೆ
ಮುಂದುವರೆದು ಮಾತನಾಡಿದ ಅವರು ನಮ್ಮ ಕುಟುಂಬಗಳನ್ನು ಬೆಳೆಸುವುದಕ್ಕೆ ಹಾಗೂ ನಮ್ಮನ್ನು ವಿಶ್ವಾಸದಲ್ಲಿ ಬೆಳೆಸುವುದಕ್ಕೆ ಮೂಲ ಕಾರಣ ನಮ್ಮ ಅಜ್ಜ-ಅಜ್ಜಿಯರು ಹಾಗೂ ಹಿರಿಯರಾಗಿದ್ದಾರೆ. ಕುಟುಂಬಕ್ಕಾಗಿ ಅವರು ಮಾಡಿರುವ ತ್ಯಾಗ ಹಾಗೂ ಸೇವೆಗಳು ಅನುಪಮ. ಎಂದಿಗೂ ಸಹ ಅವರನ್ನು ನಾವು ಒಬ್ಬಂಟಿಯಾಗಿಸಬಾರದು. ಪ್ರಸ್ತುತ ಕಾಲಘಟ್ಟದಲ್ಲಿ ಅವರನ್ನು ನಾವು ಹೊರೆ ಎಂದು ಪರಿಗಣಿಸುತ್ತಿದ್ದೇವೆ. ಆದರೆ, ನಾವೆಲ್ಲರೂ ಅವರಿಂದಲೇ ಬಂದವರು ಎಂಬುದನ್ನು ನಾವು ಮರೆಯಬಾರದು.
ಈ ಸಂದರ್ಭದಲ್ಲಿ ಅವರ ತ್ಯಾಗ ಹಾಗೂ ಸೇವೆಗೆ ನಾವೆಲ್ಲರೂ ಅವರಿಗೆ ಚಪ್ಪಾಳೆಯನ್ನು ತಟ್ಟುವುದರ ಮೂಲಕ ಅವರನ್ನು ಸ್ಮರಿಸೋಣ ಹಾಗೂ ಅವರ ಪ್ರೀತಿ ಹಾಗೂ ಕಾಳಜಿಗೆ ಧನ್ಯವಾದಗಳನ್ನು ತಿಳಿಸೋಣ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.