ಪೋಪ್ ಫ್ರಾನ್ಸಿಸ್: ನಮ್ಮ ಪೂರ್ವಾಗ್ರಹಗಳಿಂದ ಬರುವುದು ವಿಶ್ವಾಸವಲ್ಲ
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ ನಗರದಲ್ಲಿ ಭಾನುವಾರ ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ನಮ್ಮ ಪೂರ್ವಾಗ್ರಹಗಳಿಂದ ವಿಶ್ವಾಸವು ಬರುವುದಿಲ್ಲ ಎಂದು ಹೇಳಿದ್ದಾರೆ ಮಾತ್ರವಲ್ಲದೆ, ಜೀವಂತ ರೊಟ್ಟಿಯಾದ ಕ್ರಿಸ್ತರನ್ನು ನಮ್ಮ ಬದುಕಿನ ಆಧ್ಯಾತ್ಮಿಕ ಆಹಾರವನ್ನಾಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಭಾನುವಾರ ವ್ಯಾಟಿಕನ್ ನಗರದಲ್ಲಿ ತ್ರಿಕಾಲ ಪ್ರಾರ್ಥನೆಯಲ್ಲಿ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್, ಕೇವಲ ಪ್ರಾಪಂಚಿಕ ವಸ್ತುಗಳಿಂದ ನಮ್ಮ ಜೀವನವು ಪರಿಪೂರ್ಣವಾಗುವುದಿಲ್ಲ. ಮೊದಲಿಗೆ ನಮ್ಮ ಜೀವನದಲ್ಲಿ ಉದಾರವಾಗಿ ನೀಡುವುದನ್ನು ನಾವು ಅಳವಡಿಸಿಕೊಂಡಾಗ ಮಾತ್ರ ಬದುಕು ಪರಿಪೂರ್ಣತೆಯೆಡೆಗೆ ಸಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ಭಾನುವಾರದ ಶುಭ ಸಂದೇಶದ ವಾಚನವನ್ನು ಧ್ಯಾನಿಸಿದ ವಿಶ್ವಗುರು ಫ್ರಾನ್ಸಿಸ್ ಅವರು "ಏಸುಕ್ರಿಸ್ತರು 5000 ಜನರಿಗೆ ಆಹಾರವನ್ನು ನೀಡಿದರು. ಹೀಗೆ ಅವರು ನೀಡಿದ ಆಹಾರವನ್ನು ಜನರು ಸೇವಿಸಿದ ನಂತರವೂ ಸಹ, ಉಳಿದ ಎಲ್ಲವನ್ನು ಒಟ್ಟುಗೂಡಿಸಿದಾಗ 12 ಬುಟ್ಟಿಗಳಷ್ಟಾದವು. ಆ ಸಂದರ್ಭದಲ್ಲಿ ಯೇಸುವಿನ ಈ ಕಾರ್ಯವನ್ನು ಜನರೆಲ್ಲರೂ ಒಂದು ಅದ್ಭುತವಾಗಿ ಕಂಡರು ಮಾತ್ರವಲ್ಲದೆ ಅವರು ತಮ್ಮ ಪ್ರಾಪಂಚಿಕ ಹಸಿವನ್ನು ನೀಗಿಸಿಕೊಳ್ಳಲು ಹಾತೊರೆಯುತ್ತಿದ್ದರು. ಆದರೆ ಅವರಿಗೆ ತಮ್ಮಲ್ಲಿ ಇದ್ದುದ್ದನ್ನು ಹಂಚಿಕೊಂಡರೆ ಎಲ್ಲರಿಗೂ ಸಾಕಾಗುತ್ತದೆ ಎಂಬ ಮನೋಭಾವ ಇರಲಿಲ್ಲ." ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು "ಆ ಜನರಂತೆ ನಾವು ಸಹ ಕೆಲವೊಮ್ಮೆ ಕೇವಲ ನಮ್ಮ ಹಸಿವನ್ನು ನೀಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಸಹೋದರ ಸಹೋದರಿಯರು ಹಸಿವಿನಿಂದ ನರಳುತ್ತಿದ್ದರೂ ಸಹ ನಾವು ಅವರಡೆಗೆ ದೃಷ್ಟಿಯನ್ನು ಬೀರುವುದಿಲ್ಲ. ನಮ್ಮಲ್ಲಿರುವ ಕೊಂಚವನ್ನು ಅವರ ಜೊತೆ ಹಂಚಿಕೊಂಡರೆ ಅವರು ಬದುಕುವ ಸಂಭವವು ಹೆಚ್ಚಿರುತ್ತದೆ. ಆದರೆ ನಾವು ವಿಫಲವಾಗುತ್ತೇವೆ" ಎಂದು ಹೇಳಿದರು.