ಪೋಪ್: ಮರಣ ದಂಡನೆ ಎಂದಿಗೂ ನ್ಯಾಯ ನೀಡುವುದಿಲ್ಲ; ಬದಲಿಗೆ ಇದು ಸಮಾಜಕ್ಕೆ ವಿಷವಾಗಿದೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಭಾನುವಾರ ವ್ಯಾಟಿಕನ್ ನಗರದಲ್ಲಿ ವಕೀಲ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಡೇಲ್ ರೆಚಿನೆಲ್ಲಾ ದಂಪತಿಗಳನ್ನು ಭೇಟಿ ಮಾಡಿದರು. ಡೇಲ್ ರೆಚಿನೆಲ್ಲಾ ಅವರು ರಚಿಸಿರುವ "ಅ ಕ್ರಿಶ್ಚಿಯನ್ ಆನ್ ಡೆಥ್ ರೋ: ಮೈ ಕಮಿಟ್ಮೆಂಟ್ ಟು ದೋಸ್ ಕಂಡೆಮ್ಡ್" ಎಂಬ ಪುಸ್ತಕಕ್ಕೆ ಪೋಪ್ ಫ್ರಾನ್ಸಿಸ್ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಈ ಪುಸ್ತಕವನ್ನು ವ್ಯಾಟಿಕನ್ ಪ್ರಕಾಶನವು ಪ್ರಕಟಿಸಿದೆ.
ತಮ್ಮ ಮುನ್ನುಡಿಯಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಮರಣ ದಂಡನೆ ಎಂಬುದು ಆತ್ಮದ ಉಲ್ಲಂಘನೆಯಾಗಿದೆ. ಆತ ಕೊಂದಿದ್ದಾನೆ ಎಂದು ಇತರರು ಆತನನ್ನು ಕೊಲ್ಲುತ್ತಿದ್ದಾರೆ. ದೇವರ ಹತ್ತು ಆಜ್ಞೆಗಳಲ್ಲಿ ಕೊಲೆ ಮಾಡಬೇಡ ಎಂದು ಸ್ಪಷ್ಟವಾಗಿ ತಿಳಿಸಿದರೂ ಸಹ ನಾವು ದೇವರ ಆಜ್ಞೆಯನ್ನು ಉಲ್ಲಂಘಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಡೇಲ್ ರೆಚಿನೆಲ್ಲಾ ಅವರು ಈ ಪುಸ್ತಕಕ್ಕಾಗಿ ಕೈಗೊಂಡಿರುವ ಕೆಲಸಗಳನ್ನು ಶ್ಲಾಘಿಸಿರುವ ಪೋಪ್ ಫ್ರಾನ್ಸಿಸ್ ಅವರು "ಇದೊಂದು ಅತ್ಯಂತ ಕಷ್ಟಕರ ಹಾಗೂ ಬಹಳ ಜಾಗರೂಕತೆಯಿಂದ ಮಾಡಬೇಕಾದ ಕೆಲಸವಾಗಿದ್ದು, ಒಳ್ಳೆಯ ಕ್ರೈಸ್ತನಾಗಿ ಡೇಲ್ ರೆಚಿನೆಲ್ಲಾ ಅವರು ಇದನ್ನು ನಿರ್ವಹಿದ್ದಾರೆ" ಎಂದು ಪೋಪ್ ಫ್ರಾನ್ಸಿಸ್ ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ.