ವಿಶ್ವಗುರುಗಳ ಸೆಪ್ಟೆಂಬರ್ ತಿಂಗಳ ಪ್ರಾರ್ಥನಾ ಕೋರಿಕೆ: "ಭೂಮಿಯ ರೋಧನೆಗಾಗಿ"
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಸೆಪ್ಟೆಂಬರ್ ತಿಂಗಳ ತಮ್ಮ ಪ್ರಾರ್ಥನಾ ಕೋರಿಕೆಯನ್ನಾಗಿ ಭೂಮಿಯನ್ನು ಆರಿಸಿಕೊಂಡಿದ್ದಾರೆ. ಹವಾಮಾನ ವೈಪರಿತ್ಯ, ಪ್ರಾಕೃತಿಕ ವಿಕೋಪಗಳು ಮುಂತಾದ ವಿನಾಶಕಾರಿ ಅಂಶಗಳು ಪ್ರಕೃತಿ ರೋಧಿಸುತ್ತಿದೆ ಎಂಬುದರ ಸಂಕೇತವಾಗಿದ್ದು, ಇನ್ನಾದರೂ ನಮ್ಮ ಸಾಮಾನ್ಯಯಮನೆ ಭೂಮಿಯನ್ನು ರಕ್ಷಿಸುವಂತೆ ಕೋರಿದ್ದಾರೆ ಹಾಗೂ ಈ ಕುರಿತು ಪ್ರಾರ್ಥಿಸುವಂತೆ ಕೇಳಿದ್ದಾರೆ.
ಜಗತ್ತಿನಲ್ಲಿ ದಿನೇ ದಿನೇ ತಾಪಮಾನ ಎಂಬುದು ಹೆಚ್ಚುತ್ತಿದ್ದು, ಸರಿಯಾದ ಸಮಯಕ್ಕೆ ಮಳೆ ಆಗುತ್ತಿಲ್ಲ. ಒಂದು ವೇಳೆ ಮಳೆ ಬಂದರೂ ಸಹ ಪ್ರವಾಹ ಪರಿಸ್ಥಿತಿಗಳು ಎದುರಾಗುತ್ತಿದೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ ಎಂಬ ಎರಡು ರೀತಿಯ ಪರಿಸ್ಥಿತಿಗಳು ಪದೇ ಪದೇ ತಲೆದೋರುತ್ತಿರುವುದು ನಮ್ಮ ಭೂಮಿ ರೋಧಿಸುತ್ತಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಹೀಗಾಗಿ, ನಮ್ಮ ಸಾಮಾನ್ಯ ಮನೆಯನ್ನು ರಕ್ಷಿಸಿಕೊಳ್ಳಬೇಕಾದರೆ ಈಗಲೇ ಪ್ರಕೃತಿಯನ್ನು ನಾವು ರಕ್ಷಿಸಬೇಕು. ಅದು ಗುಣಮುಖವಾಗಲು ನಾವು ಅವಕಾಶ ಮತ್ತು ಆಸ್ಪದವನ್ನು ನೀಡಬೇಕು. ಇಂದು ಭೂಮಿಯನ್ನು ರಕ್ಷಿಸಿದರೆ ನಾಳೆ ಇದು ನಮ್ಮನ್ನು ರಕ್ಷಿಸುತ್ತದೆ ಎಂದು ಹೇಳಿದ್ದಾರೆ. ಆದುದರಿಂದ ಸೆಪ್ಟೆಂಬರ್ ತಿಂಗಳಲ್ಲಿ ನಾವು "ಭೂಮಿಯ ರೋಧನೆ"ಯನ್ನು ಕಡಿಮೆ ಮಾಡುವುದಕ್ಕಾಗಿ ಪ್ರಾರ್ಥಿಸಬೇಕು ಎಂದು ಹೇಳಿದ್ದಾರೆ.