ತನ್ನದಲ್ಲದ ತಪ್ಪಿಗೆ 33 ವರ್ಷಗಳ ಸೆರೆವಾಸ ಅನುಭವಿಸಿದ ಸರ್ದೀನಿಯಾದ ವ್ಯಕ್ತಿಯನ್ನು ಭೇಟಿಯಾದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ತನ್ನದಲ್ಲದ ತಪ್ಪಿಗೆ ಸುಮಾರು ಮೂವತ್ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿ ಇತ್ತೀಚೆಗಷ್ಟೇ ದೋಷಮುಕ್ತ ಎಂದು ಘೋಷಿಸಲಾದ ಇಟಲಿ ದೇಶದ ಸರ್ದೀನಿಯಾ ಪ್ರಾಂತ್ಯದ ಕುರಿಗಾಹಿ ಬೆನ್ಯಾಮೀನೋ ಝುಚೆಡೋ ಅವರನ್ನು ವ್ಯಾಟಿಕನ್ ನಗರದಲ್ಲಿ ಭೇಟಿಯಾಗಿದ್ದಾರೆ.
1991 ಬೆನ್ಯಾಮೀನೋ ಝುಚೆಡೋ ಅವರನ್ನು ಮೂರು ಜನರನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು ಹಾಗೂ ಅವರು ಈವರೆಗೂ ತಾನು ಅಪರಾಧಿ ಎಂದು ಕಾನೂನು ಹೋರಾಟವನ್ನು ನಡೆಸುತ್ತಲೇ ಇದ್ದರು. ಇದೀಗ ಇಟಲಿಯ ಸೆಷನ್ಸ್ ನ್ಯಾಯಾಲಯವು ಅವರನ್ನು ಪ್ರಕರಣದಿಂದ ಖುಲಾಸೆ ಮಾಡಿದ್ದು, ಅವರನ್ನು ದೋಷಮುಕ್ತ ಎಂದು ಘೋಷಿಸಿದೆ.
ಬೆನ್ಯಾಮೀನೋ ಝುಚೆಡೋ ಅವರು ತಮ್ಮ ವಕೀಲರೊಂದಿಗೆ ಸೇರಿ ಬರೆದಿರುವ ತಮ್ಮ ಆತ್ಮಕಥೆ "ಇಯೊ ಸೋನೊ ಇನ್ನೊಸೆಂತಿ" (ನಾನು ನಿರಪರಾಧಿ) ಎಂಬ ಪುಸ್ತಕದ ಪ್ರತಿಯನ್ನು ಪೋಪ್ ಫ್ರಾನ್ಸಿಸ್ ಅವರಿಗೆ ನೀಡಿದರು.
ಜೈಲಿನಲ್ಲಿದ್ದ ವೇಳೆ ತನ್ನ ದಿನಗಳನ್ನು ಮೆಲುಕು ಹಾಕಿರುವ ಝುಚೆಡೋ ಅವರು "ಅದೊಂದು ಅಮಾನವೀಯ ಅನುಭವ" ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಅವರು "ಆ ಸಮಯದಲ್ಲಿ ನನಗಿಂತ ಅತ್ಯಂತ ದಾರುಣವಾಗಿದ್ದ ಖೈದಿಗಳಿಗೆ ನನ್ನಿಂದ ಸಹಾಯ ಮಾಡುವುದು ಸಾಧ್ಯವಾಯಿತು" ಎಂದು ಹೇಳಿದ್ದಾರೆ.