ಪೋಪ್ ಫ್ರಾನ್ಸಿಸ್: ನೂತನವಾಗಿ ಪುನೀತ ಪದವಿಗೇರಿಸಲ್ಪಟ್ಟಿರುವ ಗುರುಗಳು ಶಾಂತಿ-ಸಂಧಾನದ ಸಂಕೇತವಾಗಲಿ
ವರದಿ: ಕ್ರಿಸ್ಟೋಫರ್ ವೆಲ್ಸ್, ಅಜಯ್ ಕುಮಾರ್
ಭಾನುವಾರ ಪೋಪ್ ಫ್ರಾನ್ಸಿಸ್ ಅವರು ಎಂದಿನಂತೆ ದೇವದೂತನ ಸಂದೇಶ ಪ್ರಾರ್ಥನೆಯನ್ನು ಮಾಡಿದ ನಂತರ, ಇಂದಿನ ಶುಭಸಂದೇಶದ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದರು. ತದನಂತರ ಮಾತನಾಡಿದ ಅವರು ಕಾಂಗೋ ದೇಶದಲ್ಲಿ ಮಿಶನರಿಗಳಾಗಿ ಸೇವೆ ಸಲ್ಲಿಸಿ, ಅಲ್ಲಿ ರಕ್ತ ಸಾಕ್ಷಿಗಳಾಗಿ ಮಡಿದ ನಾಲ್ವರು ಧಾರ್ಮಿಕರ ಕುರಿತು ಮಾತನಾಡಿದರು. ನೂತನವಾಗಿ ಪುನೀತ ಪದವಿಗೇರಿಸಲ್ಪಟ್ಟಿರುವ ಗುರುಗಳು ಶಾಂತಿ-ಸಂಧಾನದ ಸಂಕೇತವಾಗಲಿ ಎಂದು ಹೇಳಿದರು.
ನವೆಂಬರ್ ೧೯೬೪ ರಲ್ಲಿ ಜೇವೇರಿಯನ್ ಧಾರ್ಮಿಕ ಸಭೆಗೆ ಸೇರಿದ ಇಬ್ಬರು ಗುರುಗಳು, ಒಬ್ಬ ಧಾರ್ಮಿಕ ಸಹೋದರ ಸೇರಿದಂತೆ ಫ್ರಾನ್ಸ್ ದೇಶದ ಗುರುವೊಬ್ಬರನ್ನು ಅಂದು ನಡೆದ ದಂಗೆಗಳಲ್ಲಿ ಶಸ್ತ್ರಾಸ್ತ್ರ ಸಜ್ಜಿತ ಗುಂಪುಗಳು ಕೊಲೆ ಮಾಡಿದರು.
ಈ ನಾಲ್ವರನ್ನು ಪುನೀತರ ಪದವಿಗೇರಿಸಿದ ನಂತರ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಇವರು ಉಜ್ವಲ ಬೆಳಕಿನಂತೆ ಶುಭಸಂದೇಶಕ್ಕೆ ಸಾಕ್ಷಿಗಳಾಗಿ ಜೀವಿಸಿದರು. ಶುಭಸಂದೇಶಕ್ಕಾಗಿ ಮಡಿಯುವ ಮೂಲಕ ವಿಶ್ವಾಸದ ಧಾತುಗಳಾದರು ಎಂದು ಹೇಳಿದ್ದಾರೆ ಮಾತ್ರವಲ್ಲದೆ; ಅವರ ಈ ತ್ಯಾಗವು ಎಲ್ಲೆಲ್ಲಿ ಯುದ್ಧ ಉದ್ರಿಕ್ತತೆ ಇದೆಯೋ ಅಲ್ಲೆಲ್ಲಾ ಶಾಂತಿ ಹಾಗೂ ಸಂಧಾನದ ಸಂಕೇತವಾಗಿ ಪರಿಣಮಿಸಲಿ ಎಂದು ಹೇಳಿದರು.