ಬುರ್ಕೀನಾ ಫಾಸೋ ಉಗ್ರ ದಾಳಿಗೆ ಪೋಪ್ ಖಂಡನೆ; ಸಂತ್ರಸ್ಥರಿಗೆ ಐಕ್ಯತೆಯ ಭರವಸೆ
ವರದಿ: ಫ್ರಾನ್ಸಿಸ್ಕಾ ಮೆರ್ಲೋ, ಅಜಯ್ ಕುಮಾರ್
ಭಾನುವಾರ ಸಂತ ಪೇತ್ರರ ಚೌಕದಲ್ಲಿ ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಪೋಪ್ ಫ್ರಾನ್ಸಿಸ್ ಮಾತನಾಡಿದ್ದಾರೆ. ಈ ವೇಳೆ ಅವರು ಬುರ್ಕೀನಾ ಫಾಸೋ ಮತ್ತು ಮಧ್ಯಪ್ರಾಚ್ಯದಲ್ಲಿ ಉಂಟಾಗುತ್ತಿರುವ ಹಿಂಸೆಗೆ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ. ಪ್ರಕೃತಿಗಾಗಿ ಏನಾದರೂ ಮಾಡಬೇಕೆಂದು ಹೇಳಿದ್ದಾರೆ. ತಮ್ಮ ಪ್ರೇಷಿತ ಭೇಟಿಗೆ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸ್ಲೋವೇಕಿಯ ದೇಶದ ರಕ್ತಸಾಕ್ಷಿಯೊಬ್ಬರನ್ನು ಪುನೀತ ಪದವಿಗೇರಿಸುವ ಕುರಿತು ಮಾತನಾಡಿದ್ದಾರೆ.
ಬುರ್ಕೀನೋ ಫಾಸೋದ ಬರ್ಸಾಲೋಗೋ ಎಂಬ ಪಟ್ಟಣದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಖಂಡಿಸಿರುವ ಅವರು ಯಾವುದೇ ರೀತಿಯ ಹಿಂಸೆ ವಿನಾಶಕ್ಕೆ ಮೂಲ ಎಂದು ಹೇಳಿದ್ದಾರೆ. ಇದೇ ವೇಳೆ ಈ ದಾಳಿಯ ಸಂತ್ರಸ್ಥರ ಪರಿಸ್ಥಿತಿಗೆ ಮರುಕವನ್ನು ವ್ಯಕ್ತಪಡಿಸಿ, ಅವರಿಗಾಗಿ ಪ್ರಾರ್ಥಿಸುವ ಭರವಸೆಯನ್ನು ನೀಡಿದ್ದಾರೆ.
ಇದೇ ವೇಳೆ ಅವರು ಈಗಾಗಲೇ ಹಲವಾರು ಬಾರಿ ಹೇಳಿದಂತೆ ಈ ಬಾರಿಯೂ ಸಹ ಉಕ್ರೇನ್ ದೇಶದಲ್ಲಿ ಯುದ್ಧ ನಿಂತು ಅಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದ್ದಾರೆ. ಪ್ಯಾಲೆಸ್ತೇನಿನ ಕುರಿತೂ ಸಹ ಮಾತನಾಡಿರುವ ಅವರು ಪವಿತ್ರ ನಾಡಿನಲ್ಲಿ ಕೋವಿ ಮತ್ತು ಬಾಂಬುಗಳ ಸದ್ದಡಗಿ ಶಾಂತಿಯ ಪಾರಿವಾಳಗಳು ಎಲ್ಲೆಡೆ ಹಾರಲಿ ಎಂದು ಹೇಳಿದ್ದಾರೆ. ನೆರೆದಿದ್ದ ಎಲ್ಲರಿಗೂ ಈ ಜಗತ್ತಿನಲ್ಲಿ ಶಾಂಯತಿ ನೆಲೆಸುವಂತೆ ಪ್ರಾರ್ಥಿಸಿ ಎಂದು ಕರೆ ನೀಡಿದ್ದಾರೆ.