ಬೆಲ್ಜಿಯಂ ದೇಶಕ್ಕೆ ಬಂದಿಳಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಬೆಲ್ಜಿಯಂ ದೇಶಕ್ಕೆ ಆಗಮಿಸಿದ್ದಾರೆ. ಇಲ್ಲಿ ಮೂರು ದಿನಗಳ ಕಾಲ ಅವರು ಉಳಿದು ಕೊಳ್ಳಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರನ್ನು ಸ್ವಾಗತಿಸಲು ಬೆಲ್ಜಿಯಂ ದೇಶಕ್ಕೆ ಪ್ರೇಷಿತ ರಾಯಭಾರಿಯಾಗಿರುವ ಆರ್ಚ್'ಬಿಷಪ್ ಫ್ರಾಂಕೋ ಕಪ್ಪೋಲ, ವ್ಯಾಟಿಕನ್ ರಾಜ್ಯಕ್ಕೆ ಬೆಲ್ಜಿಯಂನ ರಾಯಭಾರಿಯಾಗಿರುವ ಪ್ಯಾಟ್ರಿಕ್ ರೆನೋ ಅವರು ಪೋಪರ ವಿಮಾನವನ್ನು ಹತ್ತಿದರು ಹಾಗೂ ಆ ಮೂಲಕ ಅವರನ್ನು ಬರಮಾಡಿಕೊಂಡರು.
ಬ್ರಸೆಲ್ಸ್ ನಗರದ ಮಹಾಧರ್ಮಾಧ್ಯಕ್ಷರಾದ ಮಲಿನೆ ಬ್ರಕ್ಷಲ್ ಅವರು ಪೋಪ್ ಫ್ರಾನ್ಸಿಸ್ ಅವರಿಗಾಗಿ ಕಾದು, ಅವರು ವಿಮಾನ ಇಳಿದ ನಂತರ ಅವರನ್ನು ಬರಮಾಡಿಕೊಂಡರು. ಪೋಪ್ ಫ್ರಾನ್ಸಿಸ್ ಅವರು ಬರುತ್ತಿದ್ದಂತೆ ಅವರಿಗೆ ಸರ್ಕಾರಿ ಗೌರವವನ್ನು ಸಲ್ಲಿಸಿ, ಬೆಲ್ಜಿಯಂ ಹಾಗೂ ವ್ಯಾಟಿಕನ್ ರಾಜ್ಯದ ರಾಷ್ಟ್ರಗೀತೆಗಳನ್ನು ನುಡಿಸಲಾಯಿತು. ಮಕ್ಕಳ ಗಾನವೃಂದವು ಪೋಪ್ ಫ್ರಾನ್ಸಿಸ್ ಅವರಿಗಾಗಿ ವಿಶೇಷ ಹಾಡುಗಳನ್ನು ಹಾಡುವ ಮೂಲಕ ಅವರನ್ನು ಸ್ವಾಗತಿಸಿತು.
ಬೆಲ್ಜಿಯಂ ದೇಶಕ್ಕೆ ಪೋಪ್ ಫ್ರಾನ್ಸಿಸ್ ಅವರಿಗೂ ಮೊದಲು ಭೇಟಿ ನೀಡಿದ ಏಕೈಕ ವಿಶ್ವಗುರು ಎಂದರೆ ಅದು ಸಂತ ಪೋಪ್ ದ್ವಿತೀಯ ಜಾನ್ ಪೌಲರಾಗಿದ್ದಾರೆ. ಅವರು ಬೆಲ್ಜಿಯಂ ದೇಶಕ್ಕೆ 1995 ರಲ್ಲಿ ಭೇಟಿ ನೀಡಿದರು.
ಪೋಪ್ ಫ್ರಾನ್ಸಿಸ್ ಅವರು ಇತರೆ ಅಧಿಕಾರಿಗಳೊಂದಿಗೆ ಈ ದೇಶದ ರಾಜ ಹಾಗೂ ರಾಣಿ ಅವರ ನಿವಾಸಕ್ಕೆ ತೆರಳಿ, ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ವರದಿಯಾಗಿದೆ. ತದ ನಂತರ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.