ಲುಕ್ಸೆಂಬರ್ಗ್, ಬೆಲ್ಜಿಯಂ ದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತೆ ಮರಿಯಮ್ಮನವರಿಗೆ ಧನ್ಯವಾದ ಅರ್ಪಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಕಳೆದ ವಾರ ಲುಕ್ಸೆಂಬರ್ಗ್ ಹಾಗೂ ಬೆಲ್ಜಿಯಂ ದೇಶಗಳಿಗೆ ಪ್ರೇಷಿತ ಪ್ರಯಾಣವನ್ನು ಕೈಗೊಂಡಿದ್ದರು. ಒಂದು ವಾರದ ಪ್ರೇಷಿತ ಪ್ರಯಾಣವನ್ನು ಮುಗಿಸಿ, ಸುರಕ್ಷಿತವಾಗಿ ವ್ಯಾಟಿಕನ್ ನಗರಕ್ಕೆ ಅವರು ಮರಳಿದ ಹಿನ್ನೆಲೆ, ಸಂಪ್ರದಾಯದಂತೆ ಅವರು ರೋಮ್ ನಗರದ ಸೇಂಟ್ ಮೇರಿ ಮೇಜರ್ ಮಹಾ ದೇವಾಲಯಕ್ಕೆ ಭೇಟಿ ನೀಡಿ, ಮಾತೆ ಮರಿಯಮ್ಮನವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಗ್ರೆಗೋರಿಯನ್ ಪ್ರಾರ್ಥನಾಲಯದ ಪೀಠದ ಮೇಲೆ ಹೂಗುಚ್ಛವನ್ನು ಇರಿಸಿದ ಪೋಪ್ ಫ್ರಾನ್ಸಿಸ್ ಅವರು ಮಾತೆ ಮರಿಯಮ್ಮನವರ ರಕ್ಷಣೆಗಾಗಿ ಧನ್ಯವಾದವನ್ನು ಅರ್ಪಿಸಿದ್ದಾರೆ.
ತದ ನಂತರ ಅವರು ಕಾರಿನ ಮೂಲಕ ವ್ಯಾಟಿಕನ್ನಿನ ತಮ್ಮ ನಿವಾಸ ಕಾಸಾ ಸಾಂತ ಮಾರ್ತಕ್ಕೆ ಹಿಂತಿರುಗಿದರು. ವಿಶ್ವಗುರು ಫ್ರಾನ್ಸಿಸ್ ಅವರು ಅವರ ಸಂಪ್ರದಾಯದಂತೆ ಪ್ರೇಷಿತ ಪ್ರಯಾಣವನ್ನು ಆರಂಭಿಸುವ ಮೊದಲು ಹಾಗೂ ಪ್ರೇಷಿತ ಪ್ರಯಾಣವನ್ನು ಮುಗಿಸಿ ಹಿಂತಿರುಗಿದ ನಂತರ ಈ ದೇವಾಲಯಕ್ಕೆ ಭೇಟಿ ನೀಡಿ, ಮಾತೆ ಮರಿಯಮ್ಮನವರ ಮಧ್ಯಸ್ಥಿಕೆಗಾಗಿ ಪ್ರಾರ್ಥಿಸುತ್ತಾರೆ.