ಪಪುವಾ ನ್ಯೂಗಿನಿ ದೇಶಕ್ಕೆ ಬಂದಿಳಿದ ಪೋಪ್ ಫ್ರಾನ್ಸಿಸ್
ವರದಿ: ಕ್ಲಾಡಿಯಾ ಟೋರೆಸ್, ಅಜಯ್ ಕುಮಾರ್
ತಮ್ಮ ನಲವತ್ತೈದನೇ ಪ್ರೇಷಿತ ಪ್ರಯಾಣದ ಭಾಗವಾಗಿ ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶಕ್ಕೆ ಪ್ರೇಷಿತ ಭೇಟಿಯನ್ನು ನೀಡಿದ್ದು, ಇಂದು ಬೆಳಗಿನ ಜಾವ ಇಲ್ಲಿನ ರಾಜಧಾನಿ ಪೋರ್ಟ್ ಮೋರ್ಸ್ಬಿ ಎಂಬಲ್ಲಿಗೆ ಬಂದಿಳಿದಿದ್ದಾರೆ. ತಮ್ಮ ಸರಣಿ ಪ್ರೇಷಿತ ಭೇಟಿಯ ಮಾಲಿಕೆಯಲ್ಲಿ ಇದು ಅವರು ಭೇಟಿ ನೀಡುತ್ತಿರುವ ಎರಡನೇ ದೇಶವಾಗಿದೆ.
ಪೋಪ್ ಫ್ರಾನ್ಸಿಸ್ ಅವರನ್ನು ನೋಡಲು ಪಪುವಾ ನ್ಯೂಗಿನಿ ದೇಶದ ವಿವಿಧ ಭಾಗಗಳಿಂದ ಭಕ್ತಾಧಿಗಳು ರಾಜಧಾನಿಗೆ ಬರುತ್ತಿದ್ದಾರೆ. ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ರಾಜಧಾನಿ ಪೋರ್ಟ್ ಮೋರ್ಸ್ಬಿ ನಗರಕ್ಕೆ ಆಗಮಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರ ಭೇಟಿಯ ವಿಶೇಷತೆಗಳು
ತಮ್ಮ ಭೇಟಿಯ ವೇಳೆಯಲ್ಲಿ ಮೊಟ್ಟ ಮೊದಲನೇಯದಾಗಿ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸರ್ಕಾರದ ಮಂತ್ರಿಗಳೂ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ರಾಜತಾಂತ್ರಿಕ ಅಧಿಕಾರಿಗಳನ್ನು ಭೇಟಿ ಮಾಡಿ, ಸಂವಾದಿಸಲಿದ್ದಾರೆ. ತದ ನಂತರ ಬೀದಿಯಲ್ಲಿ ಅನಾಥರಾಗಿರುವ ಮಕ್ಕಳೂ ಸೇರಿದಂತೆ ವಿಶೇಷ ಚೇತನ ಮಕ್ಕಳ ಗುಂಪುಗಳನ್ನು ಭೇಟಿ ಮಾಡಲಿದ್ದಾರೆ.
ಇಲ್ಲಿನ ಕ್ರೈಸ್ತರ ಸಹಾಯಮಾತೆ ಪ್ರಧಾನಾಲಯದಲ್ಲಿ ಪಪುವಾ ನ್ಯೂಗಿನಿ ಮತ್ತು ಸೋಲೊಮೊನ್ ದ್ವೀಪಗಳ ಕಥೋಲಿಕ ಧರ್ಮಾಧ್ಯಕ್ಷರು, ಗುರುಗಳು, ಸೇವಾದರ್ಶಿಗಳೂ ಸೇರಿದಂತೆ ಧಾರ್ಮಿಕ ಸಹೋದರ ಸಹೋದರಿಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕೊನೆಗೆ ಇಲ್ಲಿನ ಸರ್ ಜಾನ್ ಗೈಸ್ ಸ್ಟೇಡಿಯಂನಲ್ಲಿ ಭಕ್ತಾಧಿಗಳಿಗಾಗಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ವನಿಮೋ ಎಂಬ ಪ್ರಾಂತ್ಯಕ್ಕೆ ಅಂತಿಮವಾಗಿ ಪಯಣಿಸುವ ಪೋಪ್ ಫ್ರಾನ್ಸಿಸ್ ಅಲ್ಲಿನ ಜನತೆಯನ್ನು ಹಾಗೂ ಶುಭಸಂದೇಶಕ ಪ್ರಸಾರಕರನ್ನು ಭೇಟಿ ಮಾಡಿ ಹೊರಡಲಿದ್ದಾರೆ.
ಮೂವತ್ತು ವರ್ಷಗಳ ನಂತರ ಮತ್ತೆ ಪೋಪ್ ಭೇಟಿ
ಮೂವತ್ತು ವರ್ಷಗಳ ಹಿಂದೆ ಇಲ್ಲಿಗೆ ಪೋಪ್ ಸಂತ ದ್ವಿತೀಯ ಜಾನ್ ಪೌಲರು ಆಗಮಿಸಿದ್ದರು. ಇದೀಗ ಪೋಪ್ ಫ್ರಾನ್ಸಿಸ್ ಅವರು ಈ ದೇಶಕ್ಕೆ ಭೇಟಿ ನೀಡಿದ್ದಾರೆ.