ಇಂಡೋನೇಶಿಯಾದಲ್ಲಿ ಜೆಸುಯಿಟರಿಗೆ “ಸೋದರತ್ವದ ಭೇಟಿ”ಯನ್ನು ನೀಡಿದ ಪೋಪ್ ಫ್ರಾನ್ಸಿಸ್
ವರದಿ: ಸಾಲ್ವತೋರೆ ಚೆರ್ನೂಝಿಯೋ, ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಇಂಡೋನೇಶಿಯಾ ದೇಶಕ್ಕೆ ತಮ್ಮ ಪ್ರೇಷಿತ ಭೇಟಿಯ ಎರಡನೇ ದಿನದಂದು ಜಕಾರ್ತಾದ ಪ್ರೇಷಿತ ರಾಯಭಾರಿ ಕಚೇರಿಯಲ್ಲಿ, ಸಂಪ್ರದಾಯದಂತೆ ಜೆಸುಯಿಟ್ ಸಭೆಯ ಗುರುಗಳೊಂದಿಗೆ ತಮ್ಮ “ಸೋದರತ್ವ ಭೇಟಿ”ಯನ್ನು ಹಮ್ಮಿಕೊಂಡಿದ್ದಾರೆ.
ಈ ವೇಳೆಯಲ್ಲಿ ಜಕಾರ್ತಾ ಮಹಾಧರ್ಮಕ್ಷೇತ್ರದ ನಿವೃತ್ತ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಜೂಲಿಯಸ್ ರಿಯಾದಿ ಡಾರ್ಮತ್ಮಡ್ಜ ಎಸ್. ಜೆ. ಅವರು ಉಪಸ್ಥಿತರಿದ್ದರು. ಈ ವೇಳೆ ಪೋಪ್ ಫ್ರಾನ್ಸಿಸ್ ಅವರು ಜೆಸುಯಿಟರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ಖಾಸಗಿಯಾಗಿ ಮಾತುಕತೆಯನ್ನು ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಪೋಪ್ ಫ್ರಾನ್ಸಿಸ್ ಅವರ ಈ ಭೇಟಿಯ ಕುರಿತು ಮಾತನಾಡಿರುವ ವ್ಯಾಟಿಕನ್ನಿನ ಸಂಸ್ಕೃತಿ ಪೀಠದ ಉಸ್ತುವಾರಿ ಕಾರ್ಯದರ್ಶಿ ಫಾದರ್ ಅಂತೋನಿಯೋ ಸ್ಪರಾದೋ ಎಸ್. ಜೆ. ಅವರು “ಈ ಭೇಟಿಯ ವೇಳೆ ಪೋಪ್ ಫ್ರಾನ್ಸಿಸ್ ಅವರು ಎಂದಿನಂತೆ ಬಹಳ ಲವಲವಿಕೆಯಿಂದ ಇದ್ದರು. ಆದುದರಿಂದ ಅವರು ಒಂದು ಗಂಟೆಗೂ ಹೆಚ್ಚು ಕಾಲ ಸಂವಾದವನ್ನು ನಡೆಸಿ, ನಮಗೆ ಮಾರ್ಗದರ್ಶನವನ್ನು ನೀಡಿ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು” ಎಂದು ಹೇಳಿದ್ದಾರೆ.