ಲುಕ್ಸೆಂಬರ್ಗ್ ಮತ್ತು ಬೆಲ್ಜಿಯಂ ದೇಶಕ್ಕೆ ಭೇಟಿ ನೀಡಲು ಸಿದ್ಧರಾದ ಪೋಪ್ ಫ್ರಾನ್ಸಿಸ್
ವರದಿ: ಸಾಲ್ವತೋರೆ ಸೆರ್ನೂಝಿಯೋ, ಅಜಯ್ ಕುಮಾರ್
ವ್ಯಾಟಿಕನ್ ಮಾಧ್ಯಮ ಕಚೇರಿಯ ನಿರ್ದೇಶಕರಾದ ಮತ್ತಿಯೋ ಬ್ರೂನಿ ಅವರು ಪೋಪ್ ಫ್ರಾನ್ಸಿಸ್ ಅವರ 46ನೇ ಪ್ರೇಷಿತ ಪ್ರಯಾಣದ ಕುರಿತು ಇಂಚಿಂಚು ಮಾಹಿತಿಯನ್ನು ನೀಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಲುಕ್ಸೆಂಬರ್ಗ್ ಹಾಗೂ ಬೆಲ್ಜಿಯಂ ದೇಶಕ್ಕೆ ನಾಳೆ ಭೇಟಿ ನೀಡುತ್ತಿದ್ದಾರೆ. ಅವರ ಈ ಭೇಟಿಯ ಶೀರ್ಷಿಕೆ ಶಾಂತಿಯಾಗಿದೆ.
ಸೆಪ್ಟೆಂಬರ್ 26-28 ರವರೆಗೆ ಪೋಪ್ ಫ್ರಾನ್ಸಿಸ್ ಅವರು ಲುಕ್ಸೆಂಬರ್ಗ್ ಹಾಗೂ ಬೆಲ್ಜಿಯಂ ದೇಶಗಳಿಗೆ ತಮ್ಮ 46ನೇ ಪ್ರೇಷಿತ ಪ್ರಯಾಣವನ್ನು ಕೈಗೊಳ್ಳಲಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಈ ಪ್ರೇಷಿತ ಭೇಟಿಯಲ್ಲಿ ವಲಸಿಗರು, ಶಾಂತಿ, ಯುವ ಜನತೆ, ಆಧ್ಯಾತ್ಮಿಕತೆ, ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯು ತಿಳಿಸಿದೆ. ಬೆಲ್ಜಿಯಂ ದೇಶದಲ್ಲಿರುವ ಪ್ರತಿಷ್ಟಿತ ವಿಶ್ವವಿದ್ಯಾಲಯವಾದ ಕ್ಯಾಥೊಲಿಕ್ ಯೂನಿವರ್ಸಿಟಿ ಆಫ್ ಲುವೇನ್ ಅನ್ನು 1425 ರಲ್ಲಿ ಸ್ಥಾಪಿಸಲಾಗಿದ್ದು, ಇದು ಮುಂದಿನ ವರ್ಷ ತನ್ನ ಸ್ಥಾಪನೆಯ 600 ವರ್ಷಗಳನ್ನು ಪೂರೈಸಲಿದೆ.
ಇದಕ್ಕೂ ಮುಂಚಿತವಾಗಿ 1985 ರಲ್ಲಿ ಪೋಪ್ ಸಂತ ದ್ವಿತೀಯ ಜಾನ್ ಪೌಲರು ಬೆಲ್ಜಿಯಂ ದೇಶಕ್ಕೆ ಭೇಟಿ ನೀಡಿ ಇಲ್ಲಿನ ಕ್ಯಾಥೊಲಿಕ್ ಯೂನಿವರ್ಸಿಟಿ ಆಫ್ ಲುವೀನ್ ವಿದ್ಯಾರ್ಥಿಗಳ ಜೊತೆಗೆ ಸಂವಾದವನ್ನು ನಡೆಸಿದ್ದರು ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯ ನಿರ್ದೇಶಕರಾದ ಮತ್ತಿಯೋ ಬ್ರೂನಿ ಅವರು ಹೇಳಿದ್ದಾರೆ.