ಶಾಂತಿಗಾಗಿ ಪ್ರಾರ್ಥಿಸಿ, ಬಂಧಿತರ ಹಕ್ಕುಗಳನ್ನು ಪ್ರತಿಪಾದಿಸಿದ ಪೋಪ್ ಫ್ರಾನ್ಸಿಸ್
ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್
ಭಾನುವಾರದ ತಮ್ಮ ತ್ರಿಕಾಲ ಪ್ರಾರ್ಥನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಶುಭ ಸಂದೇಶದ ಚಿಂತನೆಯನ್ನು ನಡೆಸಿದ ನಂತರ, ನೆರೆದಿದ್ದ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ವಿಶ್ವದಲ್ಲಿ ಶಾಂತಿ ಸ್ಥಾಪನೆಗಾಗಿ ಮತ್ತೆ ತಮ್ಮ ಮನವಿಯನ್ನು ಪುನರುಚ್ಛರಿಸಿದ್ದು, ಬಂಧಿತರ ಹಕ್ಕುಗಳಿಗಾಗಿ ಪ್ರತಿಪಾದಿಸಿದ್ದಾರೆ.
"ಸಹೋದರ ಸಹೋದರಿಯರೇ, ಶಾಂತಿಗಾಗಿ ಪ್ರಾರ್ಥಿಸುವುದನ್ನು ಮುಂದುವರೆಸೋಣ. ದಿನೇ ದಿನೇ ಈ ಜಗತ್ತಿನಲ್ಲಿ ಯುದ್ಧ ಕಾರ್ಮೋಡಗಳು ಕವಿಯುತ್ತಿದ್ದು, ಅನೇಕ ಸಾವು ನೋವುಗಳು ಸಂಭವಿಸುತ್ತಿವೆ. ಇವೆಲ್ಲವೂ ಕೊನೆಯಾಗುವ ನಿಟ್ಟಿನಲ್ಲಿ ನಾವೆಲ್ಲರೂ ಎಡೆಬಿಡದೆ ಪ್ರಾರ್ಥಿಸೋಣ." ಎಂದು ನುಡಿದರು.
ಮುಂದುವರೆದು ಸೆರೆವಾಸವನ್ನು ಅನುಭವಿಸುತ್ತಿರುವ ಖೈದಿಗಳ ಕುರಿತು ಮಾತನಾಡಿದ ಅವರು, ವ್ಯಾಟಿಕನ್ ನಗರದಲ್ಲಿ ಖೈದಿಗಳ ಘನತೆಗಾಗಿ ನಡಿಗೆಯನ್ನು ಹಮ್ಮಿಕೊಂಡಿದ್ದ ಗುಂಪನ್ನು ಉದ್ದೇಶಿಸಿ ಮಾತನಾಡಿದರು. "ನಾವೆಲ್ಲರೂ ಮಾನವರು. ನಾವೆಲ್ಲರೂ ತಪ್ಪು ಮಾಡುತ್ತೇವೆ. ಆದುದರಿಂದ ನಾವು ಖೈದಿಗಳ ಮಾನವ ಘನತೆಯನ್ನು ಎತ್ತಿಹಿಡಿಯಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದರು.