ಡಿಲಿ ನಗರದಲ್ಲಿ ಪೋಪ್ ಫ್ರಾನ್ಸಿಸ್: ಶುಭ ಸಂದೇಶದ ಹೃದಯ ಜಗತ್ತಿನ ಮೂಲೆಗಳಲ್ಲಿದೆ

ಪೋಪ್ ಫ್ರಾನ್ಸಿಸ್ ಅವರು ಪಪುವಾ ನ್ಯೂಗಿನಿ ದೇಶದ ನಂತರ ಇದೀಗ ಟಿಮೋರ್ ಲೆಸ್ಟೆ ಎಂಬ ಪುಟ್ಟ ದೇಶಕ್ಕೆ ಬಂದಿಳಿದಿದ್ದು, ಇಲ್ಲಿನ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. ತಮ್ಮ ನಲವತ್ತೈದನೇಯ ಪ್ರೇಷಿತ ಪ್ರಯಾಣ ಸರಣಿಯ ಮೂರನೇ ದೇಶವು ಇದಾಗಿದ್ದು, ಇದಕ್ಕೂ ಮುಂಚಿತವಾಗಿ ಅವರು ಇಂಡೋನೇಷಿಯಾ, ಪಪುವಾ ನ್ಯೂಗಿನಿ ದೇಶಗಳಿಗೆ ಭೇಟಿ ನೀಡಿದ್ದರು.

ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್

ಬಲಿಪೂಜೆ ಹಾಗೂ ಮಕ್ಕಳ ಕುರಿತ ಪ್ರಭೋದನೆ

ಪೋಪ್ ಫ್ರಾನ್ಸಿಸ್ ಟಿಮೋರ್ ಲೆಸ್ಟೆ ರಾಜಧಾನಿ ಡಿಲಿ ನಗರದಲ್ಲಿ ಬಲಿಪೂಜೆಯನ್ನು ಅರ್ಪಿಸಿದರು. ಈ ವೇಳೆ ಈ ದೇಶದ ಸುಮಾರು ಆರು ಲಕ್ಷ ಜನರು ಅಂದರೆ ಅರ್ಧದಷ್ಟು ಜನರು ಈ ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಮಕ್ಕಳನ್ನು ಕುರಿತು ತಮ್ಮ ಪ್ರಭೋದನೆಯಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಮಕ್ಕಳು ನಮಗೆ ನೀಡಲಾಗಿರುವ ವರದಾನ ಹಾಗೂ ಸಂಕೇತ ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಯೆಶಾಯನ ಗ್ರಂಥದ "ಹುಟ್ಟಿತೆಮಗೆ ಮಗುವೊಂದು ಕೊಟ್ಟರೆಮಗೆ ವರಸುತನ" ಎಂಬ ವಾಕ್ಯಗಳ ಮೇಲೆ ಚಿಂತನೆಯನ್ನು ನಡೆಸಿದರು. ಮಕ್ಕಳೆಂದರೆ ನಮಗೆ ದೇವರು ನೀಡಿರುವ ವರದಾನ ಹಾಗೂ ಹೊಸ ಭವಿಷ್ಯದ ಸಂಕೇತ ಎಂದು ಹೇಳಿದ ಪೋಪ್ ಫ್ರಾನ್ಸಿಸ್, ಯೇಸುಕ್ರಿಸ್ತರು ಮಕ್ಕಳಂತಾಬೇಕು ಎಂದು ನಮಗೆ ಸಂದೇಶವನ್ನು ನೀಡಿದ್ದಾರೆ.

ವಿಶೇಷಚೇತನ ಮಕ್ಕಳೊಂದಿಗೆ ಸಂವಾದ; ಆರೈಕೆ ಮಾಡುವವರಿಗೆ ಪೋಪ್ ಕೃತಜ್ಞತೆ

ಇಲ್ಲಿನ ಇರ್ಮಾಸ್ ಆಲ್ಮಾ ಶಾಲೆಗೆ ಭೇಟಿ ನೀಡಿದ ಪೋಪ್ ಫ್ರಾನ್ಸಿಸ್ ಅವರು ಮಕ್ಕಳೊಂದಿಗೆ ಬೆರೆತು ಮಾತನಾಡಿದರು. ಪೋಪ್ ಫ್ರಾನ್ಸಿಸ್ ಅವರನ್ನು ನೋಡಲು ಇಲ್ಲಿನ ಜನತೆ ತಮ್ಮ ಸಾಂಪ್ರದಾಯಿಕ ಉಡುಗೆಯೊಂದಿಗೆ ಬಂದಿದ್ದರು.

ಈ ವೇಳೆ ಮಕ್ಕಳ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ದೇವರು ನಿಮ್ಮನ್ನು ವಿಶೇಷವಾಗಿ ಪ್ರೀತಿಸುತ್ತಾರೆ. ಸೇವೆ ಹಾಗೂ ಆರೈಕೆಯನ್ನು ಮಾಡಲು ನಮಗೆ ಕಲಿಸುತ್ತಿರುವುದಕ್ಕಾಗಿ ನಿಮಗೆ ಕೃತಜ್ಞತೆಗಳನ್ನು ತಿಳಿಸುತ್ತೇನೆ ಎಂದು ಅವರು ವಿಶೇಷ ಚೇತನ ಮಕ್ಕಳ ಆರೈಕೆಯನ್ನು ಮಾಡುತ್ತಿರುವ ಸೇವಕರಿಗೆ ಹೇಳಿದರು.

ಧಾರ್ಮಿಕ ಸಹೋದರ ಸಹೋದರಿಯರೊಂದಿಗೆ ಭೇಟಿ

ಟಿಮೋರ್ ಲೆಸ್ಟೆ ದೇಶಕ್ಕೆ ತಮ್ಮ ಪ್ರೇಷಿತ ಭೇಟಿಯ ಹಿನ್ನೆಲೆ, ಪೋಪ್ ಫ್ರಾನ್ಸಿಸ್ ಅವರು ರಾಜಧಾನಿ ಡಿಲಿ ನಗರದ ಅಮಲೋಧ್ಭವಿ ಮಾತೆ ಪ್ರಧಾನಾಲಯದಲ್ಲಿ ಟಿಮೋರ್ ಲೆಸ್ಟೆಯ ಗುರುಗಳು, ಭಗಿನಿಯರು, ಧಾರ್ಮಿಕ ಸಹೋದರ ಸಹೋದರಿಯರು, ಗುರು ಅಭ್ಯರ್ಥಿಗಳು ಹಾಗೂ ಶ್ರೀಸಾಮಾನ್ಯ ಧರ್ಮೋಪದೇಶಕರನ್ನು ಭೇಟಿ ಮಾಡಿ, ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯೇಸುಕ್ರಿಸ್ತರ ಶುಭಸಂದೇಶದ ಸುಗಂಧವನ್ನು ಸೂಸುವವರು ಹಾಗೂ ಅದನ್ನು ಪಸರಿಸುವವರು ನೀವಾಗಿದ್ದೀರಿ ಎಂದು ಹೇಳಿದ್ದಾರೆ.

10 September 2024, 14:47