ವಿಯೇಟ್ನಾಂ ಬಿರುಗಾಳಿ ಸಂತ್ರಸ್ಥರಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ವಿಯೇಟ್ನಾಂ ದೇಶದಲ್ಲಿ ಯಾಗಿ ಎಂಬ ಬಿರುಗಾಳಿಗೆ ಬಲಿಯಾದ ವ್ಯಕ್ತಿಗಳ ಕುಟುಂಬಗಳಿಗೆ ಸಂತಾಪ ಹಾಗೂ ಸಾಂತ್ವನವನ್ನು ವ್ಯಕ್ತಪಡಿಸಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್

ವಿಯೆಟ್ನಾಂ ದೇಶದಲ್ಲಿ ಕಳೆದ ವಾರ ಯಾಗಿ ಎಂಬ ಬಿರುಗಾಳಿ ಸಹಿತ ಪ್ರವಾಹ ಉಂಟಾಗಿದ್ದು, ಇದರ ಪರಿಣಾಮವಾಗಿ ಇನ್ನೂರಕ್ಕೂ ಹೆಚ್ಚು ಜನರು ಮರಣಹೊಂದಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದು, ಹಲವರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ಥರನ್ನು ರಕ್ಷಿಸುವ ಕಾರ್ಯಗಳು ಜಾರಿಯಲ್ಲಿದ್ದು, ಕಾಣೆಯಾದವರಿಗಾಗಿ ಶೋಧ ನಡೆದಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಪೋಪ್ ಫ್ರಾನ್ಸಿಸ್ ಅವರು ಈ ಬಿರುಗಾಳಿ ಹಾಗೂ ಪ್ರವಾಹದ ಕಾರಣ ಮೃತಪಟ್ಟವರ ಕುಟುಂಬಗಳಿಗೆ ಸಾಂತ್ವನವನ್ನು ತಿಳಿಸಿದ್ದು, ಅವರಿಗಾಗಿ ಪ್ರಾರ್ಥಿಸುವ ಭರವಸೆಯನ್ನು ನೀಡುವ ಮೂಲಕ ಅವರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ.

ಈ ವೇಳೆ ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿರುವ  ಸರ್ಕಾರಕ್ಕೆ ಹಾಗೂ ಸರ್ಕಾರದ ಕೆಲಸಗಾರರಿಗೆ ಅವರು ಧನ್ಯವಾದಗಳನ್ನು ತಿಳಿಸುತ್ತಾ, ಅವರ ಮೇಲೆ ದೇವರ ಆಶೀರ್ವಾದಗಳನ್ನು ಬೇಡಿದ್ದಾರೆ.

13 September 2024, 19:04