ಸಾರ್ವಜನಿಕ ದರ್ಶನದಲ್ಲಿ ಪೋಪ್: ನಿಮ್ಮ ವಿವಾಹ ಹಾಗೂ ಮಕ್ಕಳನ್ನು ರಕ್ಷಿಸಲು ಪವಿತ್ರಾತ್ಮರಿಗೆ ಮೊರೆಯಿಡಿ
ವರದಿ: ಡಿಬೋರ ಕ್ಯಾಸ್ಟಲೀನೋ ಲೂಬೋವ್, ಅಜಯ್ ಕುಮಾರ್
ಬುಧವಾರದ ತಮ್ಮ ಸಾರ್ವಜನಿಕ ದರ್ಶನದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ವಿವಾಹ ಎಂಬ ಸಂಸ್ಕಾರದ ಕುರಿತು ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ವೈವಾಹಿಕ ಬದುಕಿನಲ್ಲಿ ವಿಶ್ವಾಸವನ್ನು ಹಾಗೂ ಪವಿತ್ರಾತ್ಮರನ್ನು ಮೊದಲ ಆಯ್ಕೆಯಾಗಿರಿಸಬೇಕು ಎಂದು ಹೇಳಿದ್ದಾರೆ. ವಿವಾಹವನ್ನು ಹಾಗೂ ಕುಟುಂಬದ ಮಕ್ಕಳನ್ನು ಕಾಪಾಡಲು ಪವಿತ್ರಾತ್ಮರಿಗೆ ಪ್ರಾರ್ಥನೆ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
"ವಿವಾಹಕ್ಕೆ ವರದಾನವಾಗಿರುವ ಪವಿತ್ರಾತ್ಮರ ಬೆಂಬಲ ಅತ್ಯಗತ್ಯವಾಗಿದೆ. ಪವಿತ್ರತ್ಮರು ನಮ್ಮ ಬದುಕನ್ನು ಸೇರಿದಾಗ ನಮ್ಮಲ್ಲಿ ಸ್ವಾರ್ಥ ಎಂಬುದು ಮರೆಯಾಗುತ್ತದೆ" ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಕ್ರಿಸ್ತೀಯ ವೈವಾಹಿಕ ಬದುಕು ಎಂಬುದು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಒಬ್ಬರನ್ನು ಮತ್ತೊಬ್ಬರಿಗೆ ಸಮರ್ಪಿಸಬಹುದಾಗಿದೆ. ದೇವರು ಮನುಷ್ಯರನ್ನು ತಮ್ಮ ಅನುರೂಪದಲ್ಲಿ ಸೃಷ್ಟಿಸಿದರು. ಈ ಅನುರೂಪದ ಅವಿಭಾಜ್ಯ ಅಂಗವೇ ವೈವಾಹಿಕ ಸಂಬಂಧದಲ್ಲಿ ಪರಸ್ಪರ ಪುರುಷ ಹಾಗೂ ಸ್ತ್ರೀ ಒಂದುಗೂಡುವುದು ಹಾಗೂ ಆ ಮೂಲಕ ಪುಟ್ಟ ಕುಟುಂಬ ಎಂಬ ಧರ್ಮಸಭೆಯನ್ನು ಸ್ಥಾಪಿಸುವುದಾಗಿದೆ. ಈ ಮಾತುಗಳನ್ನು ವಿಶ್ವಗುರು ಫ್ರಾನ್ಸಿಸರು ಸಂತ ಪೇತ್ರರ ಚೌಕದಲ್ಲಿ ಹೇಳಿದರು.
ಯಾವುದೇ ವೈವಾಹಿಕ ಜೀವನಕ್ಕೆ ಒಂದು ಸುಭದ್ರ ಬುನಾದಿ ಎಂಬುದು ಇರಬೇಕು. ಆಗ ಮಾತ್ರ ಕುಟುಂಬಗಳು ಅನ್ಯೋನ್ಯವಾಗಿ ಒಟ್ಟಾಗಿ ಜೀವಿಸಬಹುದು. ಈ ಅನ್ಯೋನ್ಯತೆಯನ್ನು ಪವಿತ್ರಾತ್ಮರು ನಮಗೆ ನೀಡುತ್ತಾರೆ. ಆದ್ದರಿಂದ ವೈವಾಹಿಕ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಲು ನಾವು ಪವಿತ್ರಾತ್ಮರ ವರದಾನಕ್ಕಾಗಿ ಪ್ರಾರ್ಥಿಸಬೇಕು ಎಂದು ಹೇಳಿದರು.