ಪೋಪ್ ಫ್ರಾನ್ಸಿಸ್: ಅಮೆಜಾನ್ ಮಳೆಗಾಡುಗಳಲ್ಲಿನ ಯನೋಮಾಮಿ ಬುಡಕಟ್ಟು ಜನರನ್ನು ರಕ್ಷಿಸಿ
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಅಮೆಜಾನ್ ಮಳೆಗಾಡುಗಳ ಅಕ್ಕಪಕ್ಕದಲ್ಲಿರುವ ದೇಶಗಳ ನಾಯಕರು ಹಾಗೂ ಅಧಿಕಾರಿಗಳಿಗೆ ಮನವಿಯನ್ನು ಮಾಡಿರುವ ವಿಶ್ವಗುರು ಫ್ರಾನ್ಸಿಸ್ ಅವರು, ಅಮೆಜಾನ್ ಮಳೆಗಾಡುಗಳಲ್ಲಿನ ಯನೋಮಾಮಿ ಬುಡಕಟ್ಟು ಜನರನ್ನು ಹಾಗೂ ಅವರ ಮೂಲಭೂತ ಹಕ್ಕುಗಳನ್ನು ರಕ್ಷಿಸಿ ಎಂದು ವಿನಂತಿಸಿಕೊಂಡಿದ್ದಾರೆ.
ವಿಶ್ವಗುರು ಫ್ರಾನ್ಸಿಸ್ ಅವರು ಈ ಮಾತುಗಳನ್ನು ಸಂತರ ಪದವಿಗೆರಿಸುವ ಬಲಿಪೂಜೆಯ ನಂತರ, ಸಂತ ಪೇತ್ರರ ಚೌಕದಲ್ಲಿ ಹೇಳಿದ್ದಾರೆ. ನೂತನ ಸಂತರುಗಳಲ್ಲಿ ಒಬ್ಬರಾದ ಸಂತ ಜೋಸೆಫ್ ಅಲಮಾನೋ ಅವರು ಮತ್ತೊಬ್ಬರನ್ನು ಸಹೋದರರಂತೆ ಕಂಡು, ಅವರನ್ನು ರಕ್ಷಿಸಲು ನಮಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಯನೋಮಾಮಿ ಎಂಬುದು ಸುಮಾರು 35000 ಜನರಿರುವ ಅಮೆಜಾನ್ ಕಾಡಿನ ಒಂದು ಬುಡಕಟ್ಟು ಆಗಿದ್ದು, ಇವರು ವೆನೆಜುಲಾ ಹಾಗೂ ಬ್ರೆಜಿಲ್ ದೇಶದ ನಡುವೆ ಸುಮಾರು 200 ರಿಂದ 300 ಹಳ್ಳಿಗಳಲ್ಲಿ ಜೀವಿಸುತ್ತಿದ್ದಾರೆ. ಇವರು ಇರುವ ಜಾಗದಲ್ಲಿ ಈಗಾಗಲೇ ಚಿನ್ನದ ಗಣಿಗಾರಿಕೆ ಆರಂಭವಾಗಿದ್ದು, ಈ ಗಣಿಗಾರಿಕೆಯು ಸಾಕಷ್ಟು ಪ್ರಾಕೃತಿಕ ವಿಕೋಪಗಳಿಗೆ ಕಾರಣವಾಗುತ್ತದೆ ಎಂದು ಪರಿಸರ ಕಾರ್ಯಕರ್ತರು ಆರೋಪಿಸಿದ್ದಾರೆ.
ಈ ಬಲಿ ಪೂಜೆಯ ಸಂದರ್ಭದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ನಡೆಯುತ್ತಿರುವ ಯುದ್ಧಗಳ ಕುರಿತು ಪ್ರಸ್ತಾಪಿಸಿ, ಆದಷ್ಟು ಬೇಗ ಈ ಯುದ್ಧಗಳು ಕೊನೆಗೊಂಡು ಜಗತ್ತಿನಲ್ಲಿ ಶಾಂತಿ ನೆಲೆಸುವಂತಾಗಲಿ ಎಂದು ಪ್ರಾರ್ಥಿಸಿದರು ಹಾಗೂ ನೆರೆದಿದ್ದ ಭಕ್ತಾದಿಗಳಿಗೆ ಈ ಉದ್ದೇಶಕ್ಕಾಗಿ ಪ್ರಾರ್ಥಿಸುವಂತೆ ಕರೆ ನೀಡಿದರು.