ಥೈಲ್ಯಾಂಡ್ ಬಸ್ ಬೆಂಕಿ ಅವಘಡಕ್ಕೆ ಮರುಗಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಕಳೆದ ವಾರ ಥೈಲ್ಯಾಂಡ್ ದೇಶದ ಬ್ಯಾಂಕಾಕ್ ನಗರದ ಹೆದ್ದಾರಿಯಲ್ಲಿ ನಡೆದ ಬಸ್ ಬೆಂಕಿ ಅವಘಡಕ್ಕೆ ಮರುಗಿದ್ದಾರೆ. ಈ ಅವಘಡದಲ್ಲಿ ಶಿಕ್ಷಕರು ಸೇರಿದಂತೆ ಸುಮಾರು 23 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಪೋಪ್ ಫ್ರಾನ್ಸಿಸ್ ಅವರು ಈ ಕುರಿತು ಮೃತರ ಕುಟುಂಬಗಳಿಗೆ ತಮ್ಮ ಸಾಂತ್ವನವನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರಿದ್ದಾರೆ.
ಈ ಶಾಲಾ ಬಸ್ ಬ್ಯಾಂಕಾಕ್ ನಗರದ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಕಾಣಿಸಿಕೊಂಡ ಬೆಂಕಿ ಬೇಗನೆ ಹರಡಿದ ಪರಿಣಾಮ ಅದರಲ್ಲಿದ್ದ ಅನೇಕ ಶಿಕ್ಷಕರು ಹಾಗೂ ಮಕ್ಕಳಿಗೆ ಇದರಿಂದ ಪಾರಾಗಲು ಸಾಧ್ಯವಾಗಲಿಲ್ಲ. ಈ ಅವಘಡದಲ್ಲಿ 23 ವಿದ್ಯಾರ್ಥಿಗಳೂ ಸೇರಿದಂತೆ ಅನೇಕ ಶಿಕ್ಷಕರು ದುರ್ಮರಣ ಹೊಂದಿದ್ದಾರೆ. ಅಕ್ಟೋಬರ್ 2 ರಂದು ಮೃತರ ಕಳೇಬರವನ್ನು ಗುರುತಿಸಲು ಅವರ ಕುಟುಂಬಸ್ಥರು ಬ್ಯಾಂಕಾಕ್ ನಗರಕ್ಕೆ ಬಂದಿದ್ದಾರೆ.
ಸಮನ್ ಚನ್ಪುಟ್ ಎಂಬ ಈ ಬಸ್ ಚಾಲಕ ಬೆಂಕಿ ಕಾಣಿಸಿಕೊಂಡ ನಂತರ ಅಲ್ಲಿಂದ ಪರಾರಿಯಾಗಿದ್ದು, ಹಲವು ಗಂಟೆಗಳ ನಂತರ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಪೋಪ್ ಫ್ರಾನ್ಸಿಸ್ ಅವರು ಮೃತರ ಕುಟುಂಬಗಳಿಗೆ ತಮ್ಮ ಸಾಂತ್ವನವನ್ನು ವ್ಯಕ್ತಪಡಿಸಿ, ಭರವಸೆಯಿಂದಿರುವಂತೆ ಹೇಳಿದ್ದಾರೆ ಹಾಗೂ ಅವರಿಗೆ ದೇವರು ಶೋಕವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಫ್ರಾರ್ಥಿಸಿದ್ದಾರೆ.