ವ್ಯಾಟಿಕನ್ನಿನ ಪಾಪವಿಖ್ಯಾಪನಾಕಾರರಿಗೆ ಪೋಪ್ ಫ್ರಾನ್ಸಿಸ್: ಸದಾ ಕ್ಷಮಿಸಿರಿ
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸರು ಇಂದು ವ್ಯಾಟಿಕನ್ ನಗರದಲ್ಲಿ ಪಾಪನಿವೇದನೆಯನ್ನು ಕೇಳುವ ಸೇವೆಯಲ್ಲಿ ನಿರತರಾಗಿರುವ ಗುರುಗಳ ಗುಂಪನ್ನು ಭೇಟಿ ಮಾಡಿ, ಅವರೊಂದಿಗೆ ಸಮಾಲೋಚಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಜನರ ಪಾಪಗಳನ್ನು ನೀವು "ಸದಾ ಕ್ಷಮಿಸಬೇಕು. ಅದೇ ನಿಮ್ಮ ಕಾರ್ಯ. ಬೇರೆಯವರು ಏನಾದರೂ ಮಾತಾಡಿಕೊಳ್ಳಲಿ" ಎಂದಿದ್ದಾರೆ.
ಪಾಪನಿವೇದನೆಯನ್ನು ಕೇಳುವ ಸೇವೆಯನ್ನು ಫ್ರಾನ್ಸಿಸ್ಕನ್ ಕನ್ವೆಂಚುವಲ್ಸ್ ಧಾರ್ಮಿಕ ಸಭೆಯ ಗುರುಗಳ ಉಸ್ತುವಾರಿಗೆ ನೀಡಿ 250 ವರ್ಷಗಳಾದ ಹಿನ್ನೆಲೆಯಲ್ಲಿ, ಈ ವರ್ಷಾಚರಣೆಯ ಅಂಗವಾಗಿ ಪಾಪ ನಿವೇದನೆ ಆಲಿಸುವ ಗುರುಗಳನ್ನು ಭೇಟಿ ಮಾಡಿ ಅವರೊಂದಿಗೆ ಸಮಾಲೋಚಿಸಿದ್ದಾರೆ. ಈ ಗುರುಗಳ ಗುಂಪಿನ ರೆಕ್ಟರ್ ಆಗಿರುವ ಫಾದರ್ ವಿನ್ಸೆಂಝೊ ಕೊನ್ಸಾತ್ತಿ, ಓ.ಎಫ್.ಎಂ. ಕನ್ವೆಂಷನಲ್ ಅವರು ಇದೇ ಸಂಧರ್ಭದಲ್ಲಿ ಅಲ್ಲಿದ್ದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಾವು ಸಂತ ಪೇತ್ರರಂತೆ ಇರಬೇಕು. ಏಕೆಂದರೆ ಸಂತ ಪೇತ್ರರು ಅವರ ವೈಯಕ್ತಿಕ ಬಲಹೀನತೆಗಳ ಹೊರತಾಗಿಯೂ ಸಹ ಕ್ಷಮೆಯನ್ನು ಬೇಡುವ ಮೂಲಕ ಸರಳತೆ ಹಾಗೂ ದೀನತೆಯನ್ನು ಬದುಕಿನಲ್ಲಿ ರೂಪಿಸಿಕೊಂಡರು. ನಾವೂ ಸಹ ಪದೇ ಪದೇ ಕ್ಷಮೆಯನ್ನು ಕೇಳುವ ಮೂಲಕ ಹಾಗೂ ಕ್ಷಮಿಸುವ ಮೂಲಕ ನಮ್ಮ ಬದುಕಿನಲ್ಲಿ ದೀನತೆಯನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಪಾಪನಿವೇದನೆಯನ್ನು ಆಲಿಸುವಾಗ ನಾವು ಕಾರುಣ್ಯದ ಕೇಳುಗರಾಗಬೇಕೆ ಹೊರತು ಮನಶಾಸ್ತ್ರಜ್ಞರಾಗಬಾರದು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ವಿಶೇಷವಾಗಿ ಯುವ ಪೀಳಿಗೆ ಹಾಗೂ ವಯಸ್ಸಾದವರ ಪಾಪ ವಿಖ್ಯಾಪನೆಯನ್ನು ಕೇಳುವಾಗ ನಾವು ತಾಳ್ಮೆಯ ಕೇಳುಗರಾಗಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.