"ಆತ ನಮ್ಮನ್ನು ಪ್ರೀತಿಸಿದರು": ಯೇಸುವಿನ ಪವಿತ್ರ ಹೃದಯದ ಪತ್ರದ ಕುರಿತು ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪ್ರಸ್ತುತ ನಮ್ಮ ಸಮಾಜದಲ್ಲಿ ವಿವಿಧ ರೀತಿಯ ಹಿಂಸೆ ಹಾಗೂ ಧೃವೀಕರಣವನ್ನು ನಾವು ನೋಡುತ್ತಿದ್ದೇವೆ. ಇವೆಲ್ಲವುಗಳೂ ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಭಾಧಿಸುತ್ತಿವೆ. ಹೀಗೆ ಭಾದಿಸುತ್ತಿರುವ ಇವುಗಳಿಗೆ ನಾವು ದೇವರೊಂದಿಗೆ ಸತ್ಸಂಬಂಧವನ್ನು ಇರಿಸಿಕೊಳ್ಳುವುದಕ್ಕೆ ಮುಳುವಾಗಲು ಸಾಧ್ಯವೇ ಇಲ್ಲ. ದೇವರ ಆತ್ಮಿಕ ಹಾಗೂ ಆಪ್ತ ಪ್ರೀತಿಯು ಪ್ರಭು ಯೇಸು ಕ್ರಿಸ್ತರ ಪವಿತ್ರ ಹೃದಯದಲ್ಲಿ ವ್ಯಕ್ತವಾಗಿ, ಅಭಿವ್ಯಕ್ತವಾಗಿದೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಹೀಗೆ ಈ ಜಗತ್ತು ವಿವಿಧ ರೀತಿಯ ನೋವು, ಸಂಕಟ ಹಾಗೂ ನಶ್ವರ ಅಂಶಗಳಿಂದ ನಲುಗುತ್ತಿದ್ದು, ಅದು ಇತರರಿಗೆ ಸ್ಪಂದಿಸುವ, ಮರುಗುವ ಹೃದಯವನ್ನೇ ಕಳೆದುಕೊಂಡಿದೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಪ್ರಭುವಿನ ಪವಿತ್ರ ಹೃದಯದ ಮೊರೆ ಹೋಗಿ, ನಮ್ಮ ಮೇಲೆ ಹಾಗೂ ಈ ಲೋಕದ ಮೇಲೆ ಕರುಣೆ ಬೀರುವಂತೆ ಅಂಗಲಾಚಬೇಕಿದೆ ಎಂದು ಹೇಳಿದ್ದಾರೆ.
ಬಹುತೇಕ ನಾವೆಲ್ಲರೂ ಪ್ರಾಪಂಚಿಕ ಅಂಶಗಳ ಭಾಗವಾಗಿ ನಮ್ಮದೇ ವಿವಿಧ ನಶ್ವರತೆಯಲ್ಲಿ ಕಳೆದು ಹೋಗಿದ್ದೇವೆ. ಭವಿಷ್ಯದ ಅಮರ ಜೀವನದ ಕುರಿತು ನಾವು ಚಿಂತಿಸದೆ ಕ್ಷಣಿಕ ಸುಖ ಹಾಗೂ ಭೋಗಾಭಿಲಾಷೆಗಳಿಗಾಗಿ ಹಾತೊರೆಯುತ್ತಿದ್ದೇವೆ. ನಾವು ದಾರಿ ತಪ್ಪಿದ ಮಂದೆಯಾಗಿದ್ದು, ಪ್ರಭು ಯೇಸು ಕ್ರಿಸ್ತರ ಹೃದಯಕ್ಕೆ ಮತ್ತೆ ಹಿಂತಿರುಗುವ ಹಾದಿಯನ್ನು ಕಂಡುಕೊಳ್ಳಬೇಕಿದೆ. ಏಕೆಂದರೆ ಅವರು ನಮ್ಮನ್ನು ಮೊದಲು ಪ್ರೀತಿಸಿದ್ದಾರೆ ಎಂದು ಪೋಪ್ ಫ್ರಾನ್ಸಿಸ್ ನುಡಿದಿದ್ದಾರೆ.
ಮುಂದುವರೆದು ಈ ಪತ್ರದಲ್ಲಿ ವಿವಿಧ ವಿಷಯಗಳ ಕುರಿತು ಪ್ರಸ್ತಾಪಿಸಲಾಗಿದ್ದು, ಅಂತಿಮವಾಗಿ ಈ ಜಗತ್ತಿನಲ್ಲಿ ಯೇಸುವಿನ ಪವಿತ್ರ ಹೃದಯದ ಪ್ರೀತಿಯೊಂದೆ ನಮ್ಮನ್ನು ಸದಾ ರಕ್ಷಿಸುವ ಅಂಶವಾಗಿದೆ ಎಂದು ಹೇಳಲಾಗಿದೆ.