ವ್ಯಾಟಿಕನ್ನಿನಲ್ಲಿ ಮಹಿಳೆಯರ ಪಾತ್ರ ಬದಲಾಗುತ್ತಿದೆ: ಯೇಸು ಸಭೆಯ ಗುರುಗಳಿಗೆ ಪೋಪ್ ಫ್ರಾನ್ಸಿಸ್
ವರದಿ: ಸಾಲ್ವತೋರೆ ಚೆರ್ನುಜಿಯೋ, ಅಜಯ್ ಕುಮಾರ್
ಪೋಪ್ ಫ್ರಾನ್ಸಿಸ್ ಅವರು ಈ ತಿಂಗಳ ಆರಂಭದಲ್ಲಿ ಲಕ್ಸೆಮ್ಬರ್ಗ್ ಹಾಗೂ ಬೆಲ್ಜಿಯಂ ದೇಶಗಳಿಗೆ ಪ್ರೇಷಿತ ಭೇಟಿಯನ್ನು ನೀಡಿದರು. ವಾಡಿಕೆಯಂತೆ ಅವರು ಈ ದೇಶದಲ್ಲಿನ ಯೇಸು ಸಭೆಯ ಗುರುಗಳನ್ನು ಭೇಟಿ ಮಾಡಿ ಸಂಭಾಷಿಸಿದರು. ವಿಶ್ವಗುರು ಫ್ರಾನ್ಸಿಸ್ ಅವರು ಯೇಸು ಸಭೆಯ ಗುರುಗಳೊಂದಿಗೆ ಮಾತನಾಡಿದ ವಿಷಯಗಳ ಕುರಿತು "ಲಾ ಸಿವಿಲ್ಟ ಕಟ್ಟೋಲಿಕ" ಪತ್ರಿಕೆಯು ವರದಿ ಮಾಡಿದೆ.
ಬ್ರಸೆಲ್ಸ್ ನಗರದಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ಯೇಸು ಸಭೆಯ ಸುಮಾರು 150 ಗುರುಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಧರ್ಮಸಭೆಯಲ್ಲಿ ಮಹಿಳೆಯರ ಪಾತ್ರದ ಕುರಿತು ಅನೇಕ ಪ್ರಶ್ನೆಗಳಿಗೆ ಅವರಿಗೂ ಉತ್ತರಿಸಿದರು. ಅವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡಿದ ವಿಶ್ವಗುರು ಫ್ರಾನ್ಸಿಸ್ ಅವರು "ಧರ್ಮಸಭೆಯೇ ಮಹಿಳೆಯಾಗಿದೆ. ಮಹಿಳೆಯರು ದೇವರ ಅನೇಕ ವರದಾನಗಳನ್ನು ಪಡೆದು ತಮ್ಮದೇ ಶೈಲಿಯಲ್ಲಿ ಶುಭ ಸಂದೇಶವನ್ನು ಸಾರುತ್ತಿದ್ದಾರೆ. ಅವರ ಪಾತ್ರವನ್ನು ಕೇವಲ "ದೈವರಾದನೆ ಸೇವೆಗೆ" ಸೀಮಿತಗೊಳಿಸಿ ಮಾತನಾಡುವುದು ನನಗೆ ಇಷ್ಟವಿಲ್ಲ. ಪುರುಷತ್ವ ಹಾಗೂ ಸ್ತ್ರೀ ಎಂಬುದು 'ಮಾರುಕಟ್ಟೆಯ' ಪದಗಳಾಗಿವೆ. ನಾನು ಈಗಾಗಲೇ ಹೇಳಿದಂತೆ ವ್ಯಾಟಿಕನ್ನಿನಲ್ಲಿ ಮಹಿಳೆಯರ ಪಾತ್ರ ಬದಲಾಗಿದೆ. ಇಲ್ಲಿನ ಅನೇಕ ಅಧಿಕಾರ ಸ್ಥರದ ಹುದ್ದೆಗಳಲ್ಲಿ ಅನೇಕ ಮಹಿಳೆಯರನ್ನು ಒಳಗೊಳ್ಳಲಾಗುತ್ತಿದೆ. ನನ್ನ ಪ್ರಕಾರ ಇದು ಅತ್ಯಂತ ಮಹತ್ವದ ಬದಲಾವಣೆ" ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದ್ದಾರೆ.
ಇದೆ ವೇಳೆ ವಿಶ್ವಗುರು ಫ್ರಾನ್ಸಿಸ್ ಅವರು ಬ್ಯಾಟಿಕನ್ ನಗರದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸುತ್ತಿರುವ ಮಹಿಳೆಯರ ಪಾತ್ರವನ್ನು ಇಲ್ಲಿ ನೆನಪಿಸಿಕೊಂಡರು ಹಾಗೂ ಅವರ ಹೆಸರುಗಳನ್ನು ಉದಾಹರಣೆಯಾಗಿ ಬಳಸಿಕೊಂಡರು.
ಮುಂದುವರೆದು ಮಾತನಾಡಿದ ಅವರು ವಲಸಿಗರ ಸಮಸ್ಯೆಗಳ ಕುರಿತು ಏಸು ಸಭೆಯ ಗುರುಗಳೊಂದಿಗೆ ಚರ್ಚಿಸಿದರು. ನಮ್ಮ ವಲಸಿಗ ಸಹೋದರ ಸಹೋದರಿಯರು ಬೇರೆ ಯಾವುದೂ ಗ್ರಹದಿಂದ ಇಲ್ಲಿಗೆ ಬಂದವರಲ್ಲ. ಅವರು ಸಹ ನಮ್ಮಂತೆ ಮನುಷ್ಯರಾಗಿದ್ದು ಉತ್ತಮ ಜೀವನವನ್ನು ಅರಸಿಕೊಂಡು ವಿವಿಧ ದೇಶಗಳಿಗೆ ಹೊರಟಿದ್ದಾರೆ. ಹೀಗೆ ವಲಸೆ ಹೋಗುವ ಅವರಿಗೆ ಬದುಕು ಅತ್ಯಂತ ಕಠಿಣ ಹಾಗೂ ಕಷ್ಟಕರವಾಗಿರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ನಾವು ನಮ್ಮ ಕೈಲಾದಷ್ಟು ನೆರವನ್ನು ನೀಡುವುದು ಕ್ರಿಸ್ತೀಯ ಜೀವನದ ಮೌಲ್ಯಗಳಲ್ಲೊಂದಾಗಿದೆ ಎಂದು ವಿಶ್ವಗುರು ಫ್ರಾನ್ಸಿಸ್ ಹೇಳಿದ್ದಾರೆ.