ಕಿರ್ಗಿಸ್ತಾನ್ ಅಧ್ಯಕ್ಷರನ್ನು ವ್ಯಾಟಿಕನ್ ನಗರಕ್ಕೆ ಬರಮಾಡಿಕೊಂಡ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಕಿರ್ಗಿಸ್ತಾನದ ಅಧ್ಯಕ್ಷ ಸಾದಿರ್ ಝಪರೋವ್ ಅವರನ್ನು ಖಾಸಗಿಯಾಗಿ ಭೇಟಿ ಮಾಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ಕಿರ್ಗಿಸ್ತಾನದ ಅಧ್ಯಕ್ಷ ಸಾದಿರ್ ಝಪರೋವ್ ಅವರನ್ನು ಖಾಸಗಿಯಾಗಿ ಭೇಟಿ ಮಾಡಿದ್ದಾರೆ. ಇವರನ್ನು ಶುಕ್ರವಾರ ಪೋಪ್ ಫ್ರಾನ್ಸಿಸ್ ಅವರು ಪೋಪ್ ಆರನೇ ಪೌಲರ ಸಭಾಂಗಣದಲ್ಲಿ ಭೇಟಿಯಾದರು. ಇದಾದ ನಂತರ ಕಿರ್ಗಿಸ್ತಾನದ ಅಧ್ಯಕ್ಷರು ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿ ಮಾಡಿದರು.

ವ್ಯಾಟಿಕನ್ನಿನ ಮಾಧ್ಯಮ ಕಚೇರಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಹಾಗೂ ಕಿರ್ಗಿಸ್ತಾನ್ ಅಧ್ಯಕ್ಷರ ನಡುವೆ ಉಭಯ ಕುಶಲೋಪರಿಗಳು ನಡೆದ ನಂತರ, ಆರೋಗ್ಯ, ಸಾಮಾಜಿಕ ಸೇವೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುವ ಕುರಿತು ಸಂವಾದಗಳು ನಡೆದವು. ಮುಂದುವರೆದು ಈ ಹೇಳಿಕೆಯು "ಉಭಯ ನಾಯಕರು ಪ್ರಸ್ತುತ ಜಗತ್ತಿನ ಆಗುಹೋಗುಗಳ ಕುರಿತು ವಿಚಾರ ವಿನಿಮಯವನ್ನು ಮಾಡಿಕೊಂಡರು. ಪ್ರಸಕ್ತ ವಿದ್ಯಾಮಾನಗಳ ಕುರಿತ ಚರ್ಚೆಯಲ್ಲಿ ಯುದ್ಧ, ಶಾಂತಿ ಸ್ಥಾಪನೆ ಹಾಗೂ ಸಂಧಾನದ ಕುರಿತು ಚರ್ಚೆ ನಡೆಯಿತು" ಎಂದು ಹೇಳಿದೆ.

ಈ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರು ಕಿರ್ಗಿಸ್ಥಾನದ ಅಧ್ಯಕ್ಷರಿಗೆ ವ್ಯಾಟಿಕನ್ ಪ್ರೇಷಿತ ಅರಮನೆಯ ಸುಂದರ ಚಿತ್ರವನ್ನು ಉಡುಗೊರೆಯಾಗಿ ನೀಡಿದರೆ, ಕಿರ್ಗಿಸ್ಥಾನದ ಅಧ್ಯಕ್ಷರು ತಮ್ಮ ದೇಶದ ಪರ್ವತಗಳಲ್ಲಿ ಮಾತ್ರವೇ ಸಿಗುವ ಅಮೂಲ್ಯ ಜೇನುತುಪ್ಪದ ಸುಂದರ ಬಾಟಲಿಗಳನ್ನು ನೀಡಿದರು.  

  

 

04 October 2024, 14:45