ಲಿಬೇರಿಯ ದೇಶದ ಅಧ್ಯಕ್ಷರನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಶುಕ್ರವಾರ ಬೆಳಗ್ಗೆ ವ್ಯಾಟಿಕನ್ ನಗರದಲ್ಲಿ ಲಿಬೇರಿಯಾ ದೇಶದ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ.

ವರದಿ: ವ್ಯಾಟಿಕನ್ ಮಾಧ್ಯಮ ಕಚೇರಿಯ ಪತ್ರಿಕಾ ಹೇಳಿಕೆ

ಇಂದು ಅಕ್ಟೋಬರ್ 18ರಂದು ವ್ಯಾಟಿಕನ್ ನಗರದಲ್ಲಿನ ಪ್ರೇಷಿತ ಅರಮನೆಯಲ್ಲಿ ವಿಶ್ವಗುರು ಫ್ರಾನ್ಸಿಸರು ಲಿಬೇರಿಯ ದೇಶದ ಅಧ್ಯಕ್ಷರಾದ ಜೋಸೆಫ್ ನ್ಯೂಮಾ ಭುವಕೈ ಅವರನ್ನು ಭೇಟಿ ಮಾಡಿದ್ದಾರೆ. ತದನಂತರ ಲಿಬೇರಿಯಾ ದೇಶದ ಅಧ್ಯಕ್ಷರು ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೇತ್ರೊ ಪೆರೋಲಿನ್ ಅವರನ್ನು ಭೇಟಿ ಮಾಡಿದರು. ಇದೇ ಸಂದರ್ಭದಲ್ಲಿ ವ್ಯಾಟಿಕನಿನ್ನ ವಿದೇಶಾಂಗ ಸಂಪರ್ಕಗಳ ಕಾರ್ಯದರ್ಶಿಯಾಗಿರುವ ಅರ್ಚ್ ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಈ ಸೌಹಾರ್ದ ಮಾತುಕತೆಗಳ ವೇಳೆ, ಲಿಬೇರಿಯ ದೇಶದಲ್ಲಿನ ಪ್ರಸ್ತುತ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಕುರಿತು ಚರ್ಚಿಸಲಾಯಿತು. ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಥೋಲಿಕ ಧರ್ಮಸಭೆಯ ಸಹಯೋಗದಲ್ಲಿ ನಡೆಯುತ್ತಿರುವ ವಿವಿಧ ಸೇವಾ ಕಾರ್ಯಗಳ ಕುರಿತು ಸಹ ಚರ್ಚೆಗಳು ನಡೆದವು.

ಪ್ರಸ್ತುತ ಅಂತರಾಷ್ಟ್ರೀಯ ವಿದ್ಯಮಾನಗಳ ಕುರಿತು ಸಹ ಉಭಯ ಪಕ್ಷಗಳು ಮಾತುಕತೆಯನ್ನು ನಡೆಸಿದವು ಹಾಗೂ ವಿಶೇಷವಾಗಿ ಲಿಬೇರಿಯಾ ದೇಶ ಹಾಗೂ ಕಥೋಲಿಕ ಧರ್ಮಸಭೆಯನ್ನು ಭಾದಿಸುತ್ತಿರುವ ವಿಷಯಗಳ ಕುರಿತು ಚರ್ಚೆಯನ್ನು ನಡೆಸಲಾಯಿತು.

ವಿಶ್ವಗುರು ಫ್ರಾನ್ಸಿಸ್ ಅವರು ಲಿಬೇರಿಯಾ ದೇಶದ ಅಧ್ಯಕ್ಷರಿಗೆ ಆಲಿವ್ ಚಿಗುರನ್ನು ಬಾಯಿಯಲ್ಲಿ ಹಿಡಿದಿರುವ ಪಕ್ಷಿಯ ಹಿತ್ತಾಳೆ ಪ್ರತಿಕೃತಿಯನ್ನು ನೀಡಿದರು. ಶಾಂತಿಯ ಸಂದೇಶ ಎಂಬ ಪುಸ್ತಕವನ್ನು ಸಹ ಅವರು ಲಿಬೀರಿಯಾ ದೇಶದ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದರು.

18 October 2024, 17:40