ಪವಿತ್ರ ನಾಡಿನಲ್ಲಿ ಕಳೆದು ವರ್ಷ ಹಮಾಸ್ ದಾಳಿಯಿಂದ ಮೃತರಾದವರಿಗೆ ವಿಶ್ವಗುರು ಫ್ರಾನ್ಸಿಸ್ ಐಕ್ಯತಾ ಸಂದೇಶ
ವರದಿ: ಲಿಂಡಾ ಬೋರ್ಡೋನಿ, ಅಜಯ್ ಕುಮಾರ್
ಕಳೆದ ವರ್ಷ ಹಮಾಸ್ ಸಂಘಟನೆಯು ಇಸ್ರೇಲ್ ಮೇಲೆ ದಾಳಿ ಮಾಡಿದ ಪರಿಣಾಮ ನೂರಾರು ಜನರು ಸಾವನ್ನಪ್ಪಿದ್ದರು. ನಂತರ ಪೂರ್ಣ ಪ್ರಮಾಣದಲ್ಲಿ ಮಧ್ಯಪ್ರದೇಶದಲ್ಲಿ ಯುದ್ಧ ಆರಂಭವಾಯಿತು. ಇಂದಿಗೆ ಈ ದಾಳಿ ನಡೆದು ಒಂದು ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಗುರು ಫ್ರಾನ್ಸಿಸ್ ಅವರು ತಮ್ಮ ಐಕ್ಯತಾ ಸಂದೇಶವನ್ನು ಈ ದಾಳಿಯಲ್ಲಿ ಮಡಿದ ಜನತೆಯ ಕುಟುಂಬಗಳಿಗೆ ನೀಡಿದ್ದಾರೆ ಹಾಗೂ ಯುದ್ಧವನ್ನು ನಿಲ್ಲಿಸುವಲ್ಲಿ ಅಂತರರಾಷ್ಟ್ರೀಯ ಸಮುದಾಯದ ಅಸಾಮರ್ಥ್ಯವನ್ನು ಇದೇ ಸಂದರ್ಭದಲ್ಲಿ ಟೀಕಿಸಿದ್ದಾರೆ.
ನಾನು ನಿಮ್ಮ ಕುರಿತು ಯೋಚಿಸುತ್ತಿದ್ದೇನೆ ಹಾಗೂ ನಿಮಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಹೇಳಿರುವ ವಿಶ್ವಗುರು ಫ್ರಾನ್ಸಿಸ್ ಅವರು ಇದೇ ಸಂದರ್ಭದಲ್ಲಿ ಯುದ್ಧವನ್ನು ನಿಲ್ಲಿಸುವ ನಿಟ್ಟಿನಲ್ಲಿ ಹಾಗೂ ಯುದ್ಧದ ದುರಂತಗಳನ್ನು ತಪ್ಪಿಸುವ ನೆಟ್ಟಿನಲ್ಲಿ ಶಕ್ತಿಯುತವಾಗಿರುವ ಅಂತರರಾಷ್ಟ್ರೀಯ ಸಮುದಾಯವನ್ನು ಹಾಗೂ ಅದರ ನಿಶ್ಚಲತೆಯನ್ನು ಟೀಕಿಸಿದ್ದಾರೆ.
ಪರಸ್ಪರ ಪಕ್ಷಗಳ ಪೈಕಿ ದಿನೇ ದಿನೇ ಕೋಪ ಹಾಗೂ ಪ್ರತಿಕಾರದ ಮನೋಭಾವ ಹೆಚ್ಚಾಗುತ್ತಿದೆ. ಆದರೆ ಕೆಲವೇ ಕೆಲವರು ಮಾತ್ರ ಈ ಸನ್ನಿವೇಶವನ್ನು ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ವಿಶ್ವಗುರು ಫ್ರಾನ್ಸಿಸ್ ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ತಮ್ಮ ಅಭಿಪ್ರಾಯವಾದ ಯುದ್ಧ ಎಂದಿಗೂ ಸೋಲೇ ಆಗಿದೆ ಎಂಬುದನ್ನು ಪುನರುಚ್ಚರಿಸಿದ್ದಾರೆ. ಪವಿತ್ರ ನಾಡಿನಲ್ಲಿ ಶಾಂತಿಗಾಗಿ ಆತುರಿಯುತ್ತಿರುವ ಹಾಗೂ ತಮ್ಮನ್ನು ರಕ್ಷಿಸಿಕೊಳ್ಳಲಾಗದೆ ಬಲಹೀನ ಸ್ಥಿತಿಯಲ್ಲಿರುವ ಜನತೆಯೊಂದಿಗೆ ತಮ್ಮ ಐಕ್ಯತೆಯನ್ನು ಹಾಗೂ ಪ್ರಾರ್ಥನೆಯನ್ನು ವ್ಯಕ್ತಪಡಿಸಿದ್ದಾರೆ. ಅವರನ್ನು ಉದ್ದೇಶಿಸಿ ಮಾತನಾಡಿರುವ ವಿಶ್ವಗುರು ಫ್ರಾನ್ಸಿಸ್ ದೇವರು ನಿಮ್ಮನ್ನು ಪ್ರೀತಿಸುತ್ತಾರೆ ಹಾಗೂ ಸದಾ ನಿಮ್ಮ ಜೊತೆಗಿರುತ್ತಾರೆ ಎಂದು ಸಾಂತ್ವನದ ಮಾತುಗಳನ್ನು ಆಡಿದ್ದಾರೆ.
ಕಳೆದ ವಾರ ವಿಶ್ವಗುರು ಫ್ರಾನ್ಸಿಸ್ ಅವರ ಕರೆಯ ಮೇರೆಗೆ ಇಂದಿನ ದಿನವನ್ನು ಪ್ರಪಂಚದಲ್ಲಿ ಶಾಂತಿಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಉಪವಾಸ ಹಾಗೂ ಪ್ರಾರ್ಥನೆಯ ದಿನವನ್ನಾಗಿ ಆಚರಿಸಲಾಯಿತು.