ಮೂರನೇ ಬಾರಿಗೆ ವ್ಯಾಟಿಕನ್'ಗೆ ಉಕ್ರೇನ್ ಅಧ್ಯಕ್ಷರನ್ನು ಬರಮಾಡಿಕೊಂಡ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಮೂರನೇ ಬಾರಿಗೆ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರನ್ನು ಬರಮಾಡಿಕೊಂಡಿದ್ದಾರೆ. ಈ ವೇಳೆ ಅವರು ಉಕ್ರೇನಿನ ಮಕ್ಕಳು ನಗುವುದನ್ನು ಮರೆತಿದ್ದಾರೆ ಎಂದು ಹೇಳಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್, ಅಜಯ್ ಕುಮಾರ್

ಯುದ್ಧವು ಇನ್ನೂ ಮುಂದುವರೆಯುತ್ತಿದ್ದು, ನೂರಾರು ಜನರನ್ನು ಆಹುತಿ ಪಡೆದುಕೊಳ್ಳುತ್ತಿರುವ ನಡುವೆಯೇ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ಮೂರನೇ ಬಾರಿಗೆ ವ್ಯಾಟಿಕನ್ ನಗರದಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ್ದಾರೆ. ಪೋಪ್ ಫ್ರಾನ್ಸಿಸ್ ಇವರನ್ನು ವ್ಯಾಟಿಕನ್ನಿನ ಪ್ರೇಷಿತ ಅರಮನೆಯಲ್ಲಿ ಬರಮಾಡಿಕೊಂಡಿದ್ದಾರೆ. ವ್ಯಾಟಿಕನ್ ಮಾಧ್ಯಮ ಕಚೇರಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಉಕ್ರೇನ್ ಅಧ್ಯಕ್ಷರೊಂದಿಗೆ ಯುದ್ಧದ ಹಿನ್ನೆಲೆ ಬದುಕನ್ನು ಕಳೆದುಕೊಳ್ಳುತ್ತಿರುವ ಮಕ್ಕಳ ಕುರಿತು ಮಾತನಾಡಿದರು. ಯುದ್ಧದ ಕಾರಣ ಮಕ್ಕಳು ನಗುವನ್ನೇ ಕಳೆದುಕೊಂಡಿದ್ದಾರೆ ಎಂದು ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು.

ಶಾಂತಿಗಾಗಿ ಹಾಗೂ ಯಾತನೆಯನ್ನು ನಿಲ್ಲಿಸಲು ಮನವಿ  

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಸಂವಾದದಲ್ಲಿ ಪೋಪ್ ಫ್ರಾನ್ಸಿಸ್ ಹಾಗೂ ಝೆಲೆನ್ಸ್ಕಿ ಅವರು ಉಕ್ರೇನ್ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಕುರಿತು ಮಾತುಕತೆಯನ್ನು ನಡೆಸಿದರು. ಪೋಪ್ ಫ್ರಾನ್ಸಿಸ್ ಅವರು ತಮ್ಮ ಮಾತುಕತೆಯಲ್ಲಿ ಯುದ್ಧದ ಕಾರಣದಿಂದ ಯಾತನೆಯನ್ನು ಅನುಭವಿಸುತ್ತಿರುವ ಮಕ್ಕಳ ಕುರಿತು ವಿಶೇಷ ಕಾಳಜಿಯನ್ನು ವ್ಯಕ್ತಪಡಿಸಿದರು. ಇದರ ಹೊರತಾಗಿ, ಉಕ್ರೇನ್ ದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ, ಧಾರ್ಮಿಕ ಸ್ಥಿತಿಗತಿಗಳ ಕುರಿತು ಉಭಯ ನಾಯಕರ ನಡುವೆ ಚರ್ಚೆ ನಡೆಯಿತು ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.

ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಭೇಟಿ

ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ನಂತರ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯಾಗಿರು ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರನ್ನು ಭೇಟಿ ಮಾಡಿದರು. ಇದೇ ವೇಳೆ ಅವರು ವ್ಯಾಟಿಕನ್ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಆರ್ಚ್'ಬಿಷಪ್ ಪೌಲ್ ರಿಚರ್ಡ್ ಗ್ಯಾಲಗರ್ ಅವರನ್ನೂ ಸಹ ಭೇಟಿ ಮಾಡಿ, ಮಾತುಕತೆಯನ್ನು ನಡೆಸಿದರು.

ಸಂಪ್ರದಾಯದಂತೆ, ಪೋಪ್ ಫ್ರಾನ್ಸಿಸ್ ಅವರು ಉಕ್ರೇನ್ ಅಧ್ಯಕ್ಷರಿಗೆ "ಶಾಂತಿ ಅತಿ ಸೂಕ್ಷ್ಮ ಹೂವು" ಎಂದು ಕೆತ್ತಲಾದ ಚಿತ್ರಪಟವನ್ನು ನೀಡಿದರು. ಉಕ್ರೇನ್ ಅಧ್ಯಕ್ಷರು ಪೋಪ್ ಫ್ರಾನ್ಸಿಸ್ ಅವರಿಗೆ "ದಿ ಬೂಚಾ ಮಸಾಕರ್" ಎಂಬ ಚಿತ್ರಪಟವನ್ನು ಉಡುಗೊರೆಯಾಗಿ ನೀಡಿದರು.  

   

11 October 2024, 17:31