ಪವಿತ್ರಾತ್ಮರಿಂದ ಮುನ್ನಡೆಯುವ ದೀನ ಧರ್ಮಸಭೆಗಾಗಿ ಪೋಪ್ ಫ್ರಾನ್ಸಿಸ್ ಪ್ರಾರ್ಥನೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಹದಿನಾರನೇ ಸಿನೋಡ್ ಸಾರ್ವತ್ರಿಕ ಸಭೆಯ ಆರಂಭದಲ್ಲಿ ಎಲ್ಲಾ ಧರ್ಮಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹೀಗೆ ಅವರು ಮಾತನಾಡುವಾಗ ನಮಗೆ ಪವಿತ್ರಾತ್ಮರಿಂದ ಮುನ್ನಡೆಯುವ, ಬಡವರ ಪರವಾಗಿರುವ ದೀನ ಧರ್ಮಸಭೆಯ ಅವಶ್ಯಕತೆ ಇದೆ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ. ಈ ಜಗತ್ತಿನಲ್ಲಿ ಶಾಂತಿ ಹಾಗೂ ಕ್ಷಮೆಯನ್ನು ಬಿತ್ತುವ ಧರ್ಮಸಭೆಯ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಇದೆ ಎಂದು ಪೋಪ್ ಫ್ರಾನ್ಸಿಸ್ ಅವರು ಈ ಸಭೆಯಲ್ಲಿ ಹೇಳಿದ್ದಾರೆ.
"ಧರ್ಮಸಭೆ ಸದಾ ಪಯಣಿಸುತ್ತಿರುತ್ತದೆ" ಎಂದು ತಮ್ಮ ಮಾತುಗಳನ್ನು ಆರಂಭಿಸಿದ ಪೋಪ್ ಫ್ರಾನ್ಸಿಸ್ ಅವರು ಧರ್ಮಸಭೆಯ ಮೂಲ ಉದ್ದೇಶ ಪ್ರಭುವಿನ ಶುಭ ಸಂದೇಶವನ್ನು ಪ್ರಪಂಚದ ಕಟ್ಟಕಡೆಗಳಿಗೆ ತಲುಪಿಸುವುದಾಗಿದೆ ಎಂದು ಹೇಳಿದ್ದಾರೆ. "ಪವಿತ್ರಾತ್ಮರು ಜಡವಾಗಿರುವ ಹೃದಯಗಳನ್ನು ಮೃದುಗೊಳಿಸುತ್ತಾರೆ. ನಿಸ್ತೇಜವಾಗಿರುವವರನ್ನು ಅವರ ಅಗ್ನಿಯಿಂದ ತುಂಬುತ್ತಾರೆ. ಈ ರೀತಿಯಲ್ಲಿ ಅವರು ನಮ್ಮೆಲ್ಲರನ್ನು ಒಗ್ಗೂಡಿಸಿ, ಒಂದೇ ಧರ್ಮಸಭೆಯಾಗಿ ಮುನ್ನಡೆಸುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ಶ್ರೀಸಾಮಾನ್ಯರ ಪಾತ್ರದ ಕುರಿತು ಬೆಳಕನ್ನು ಚೆಲ್ಲುತ್ತಾ "ಪ್ರತಿಯೊಂದು ಕುಟುಂಬವೂ ಒಂದು ಪುಟ್ಟ ಧರ್ಮಸಭೆಯಾಗಿದೆ. ಶ್ರೀಸಾಮಾನ್ಯರು ಧರ್ಮಸಭೆಯ ಜೀವಾಳವಾಗಿದ್ದಾರೆ. ಧರ್ಮಸಭೆಯ ಜೀವಿತದಲ್ಲಿ ಶ್ರೀಸಾಮಾನ್ಯರ ಪಾತ್ರ ಬಹು ಮುಖ್ಯವಾಗಿದ್ದು, ಈ ಸಂವಾದದಲ್ಲಿ ಅವರು ಭಾಗವಹಿಸಬೇಕು. ಏಕೆಂದರೆ ಸಿನೋಡ್ ಮೂಲ ಉದ್ದೇಶವೇ ಎಲ್ಲರ ಧ್ವನಿಗಳನ್ನು ಆಲಿಸುವುದಾಗಿದೆ" ಎಂದು ನುಡಿದರು.
"ನಾವೆಲ್ಲರೂ ಪ್ರಭುವಿನಲ್ಲಿ ದೀನತೆಯಿಂದ, ಭರವಸೆ ಹಾಗೂ ನಂಬಿಕೆಯಿಂದ ಒಂದಾಗಿ ಪಯಣಿಸುತ್ತಿದ್ದೇವೆ" ಎಂದು ಪೋಪ್ ಫ್ರಾನ್ಸಿಸ್ ಕೊನೆಯಲ್ಲಿ ಹೇಳಿದರು.