ವ್ಯಾಟಿಕನ್ ಸಂವಹನಕಾರರಿಗೆ ಪೋಪ್ ಫ್ರಾನ್ಸಿಸ್: ಇತರರು ಗೋಡೆಗಳನ್ನು ಕಟ್ಟುವ ಕಡೆ, ನೀವು ಸೇತುವೆಗಳನ್ನು ಕಟ್ಟಿ
ವರದಿ: ಜೋಸೆಫ್ ತಲ್ಲೊಚ್, ಅಜಯ್ ಕುಮಾರ್
ವಿಶ್ವಗುರು ಫ್ರಾನ್ಸಿಸ್ ಅವರು ವ್ಯಾಟಿಕನ್ ನಗರದಲ್ಲಿ ವ್ಯಾಟಿಕನ್ನಿನ ಸಂವಹನಕಾರರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ಅವರು ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ನಮ್ಮತನವನ್ನು ಬಿಟ್ಟು ಇತರರಿಗೆ ಸ್ಥಳಾವಕಾಶವನ್ನು ನೀಡುವ ಸಂವಹನದ ಕುರಿತು ನಾನು ಕನಸನ್ನು ಕಂಡಿದ್ದೇನೆ ಎಂದು ಹೇಳಿದರು.
ಇತರರು ಗೋಡೆಗಳನ್ನು ಕಟ್ಟಿ, ಸಮುದಾಯಗಳನ್ನು ಪ್ರತ್ಯೇಕಿಸುವ ಸಮಯದಲ್ಲಿ ಉತ್ತಮ ಸಂವಹನಕಾರರಾಗಿ ನೀವು ಗೋಡೆಗಳನ್ನು ಕಟ್ಟುವ ಬದಲು ಸೇತುವೆಗಳನ್ನು ಕಟ್ಟಬೇಕಿದೆ. ಆ ಮೂಲಕ ಸಮುದಾಯಗಳನ್ನು ಬೆಸೆಯಬೇಕಿದೆ. ನಮ್ಮ ಕಾಲದ ದುರಂತಗಳನ್ನು ಒಗ್ಗಟ್ಟಿನಿಂದ ಎದುರಿಸಲು ನಾವು ಈ ಕಾರ್ಯವನ್ನು ಮಾಡಬೇಕಿದೆ. ಪ್ರತ್ಯೇಕತೆಯನ್ನು ಮೂಡಿಸದೆ ಎಲ್ಲರನ್ನೂ ಬೆಸೆಯುವುದು ಸಂವಹನಕಾರರ ಕರ್ತವ್ಯವಾಗಿದೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಧರ್ಮಸಭೆಯ ಸಂವಹನಾಕಾರರು ಸತ್ಯ ಹಾಗೂ ಶಾಂತಿಯ ರಾಯಭಾರಿಯಾಗಿದ್ದಾರೆ. ಧರ್ಮ ಸಭೆಯ ಸಂವಹನಕಾರರಾಗಿ ನಾವು ರಾಜಕೀಯ ಅಥವಾ ವ್ಯವಹಾರದ ಮಾನದಂಡಗಳನ್ನು ನಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡರೆ ಹಾಗೂ ಧರ್ಮಸಭೆಯಾಗಿ ಉಳಿಯಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ.
ಸಂವಹನ ಎಂಬುದು ಎಲ್ಲಾ ವ್ಯಕ್ತಿಗಳನ್ನು ಒಟ್ಟಾಗಿ ಕರೆತರುವ ಹಾಗೂ ಯಾವುದೇ ತಾರತಮ್ಯವಿಲ್ಲದೆ ಸಹೋದರ ಸಹೋದರಿಯರಂತೆ ಜೀವಿಸುವ ಅವಕಾಶವನ್ನು ಕಲ್ಪಿಸುವ ಸಾಧನವಾಗಿದೆ. ಜನರನ್ನು ಹಾಗೂ ವಿಭಿನ್ನ ಸಂಸ್ಕೃತಿಗಳನ್ನು ಬೆಸೆಯುವ ಸಂವಹನ ಮಾಧ್ಯಮಕ್ಕಾಗಿ ನಾನು ಕನಸನ್ನು ಕಾಣುತ್ತಿದ್ದೇನೆ ಎಂದು ವಿಶ್ವಗುರು ಫ್ರಾನ್ಸಿಸ್ ಅವರು ಹೇಳಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.