ಪೋಪ್ ಫ್ರಾನ್ಸಿಸ್: ಸುವಾರ್ತಾ ಪ್ರಸಾರಕರು ಪ್ರೀತಿ ಎಂಬ ಧರ್ಮಸಭೆಯ ಭಾಷೆಯನ್ನು ಮಾತನಾಡುತ್ತಾರೆ
ವರದಿ: ಡೆವಿನ್ ವಾಟ್ಕಿನ್ಸ್, ಅಜಯ್ ಕುಮಾರ್
ಅಮೇರಿಕಾ ಖಂಡದ ವಿವಿಧ ಸುವಾರ್ತಾ ಪ್ರಸಾರಕರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು, ಸುವಾರ್ತಾ ಪ್ರಸಾರಕರು ಈ ಜಗತ್ತಿನಿ ವಿವಿಧ ಸಂಸ್ಕೃತಿಗಳ ಜನರಿಗೆ ಧರ್ಮಸಭೆಯ ಪ್ರೀತಿಯ ಭಾಷೆಯೊಂದಿಗೆ ಮಾತನಾಡಬೇಕು. ಏಕೆಂದರೆ ಈ ಭಾಷೆಯನ್ನು ಇಡೀ ಮಾನವಕುಲವು ಅರ್ಥ ಮಾಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಆರನೇ ಅಮೇರಿಕನ್ ಮಿಷನರಿ ಕಾಂಗ್ರೆಸ್ ಸಮಾವೇಷಕ್ಕೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್ ಅವರು, ಇದರಲ್ಲಿ ಭಾಗವಹಿಸಿರುವ ಸುಮಾರು 1300 ಸುವಾರ್ತಾ ಪ್ರಸಾರಕರಿಗೆ ಕಿವಿಮಾತನ್ನು ಹೇಳಿದ್ದಾರೆ. ಈ ಸಮಾವೇಷವು ಪುರ್ತೊ ರೀಕೋ ದೇಶದ ಪೊನ್ಸೆ ನಗರದಲ್ಲಿ ನಡೆದಿದೆ. ಲ್ಯಾಟಿನ್ ಅಮೇರಿಕಾ ಖಂಡದ ವಿವಿಧ ದೇಶಗಳಿಂದ ಸುವಾರ್ತಾ ಪ್ರಸಾರಕರು ಇಲ್ಲಿ ನೆರೆದಿದ್ದು, ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
"ಸುವಾರ್ತಾ ಪ್ರಸಾರಕರು ಪರಮ ತ್ರಿತ್ವಕ್ಕೆ ಸದಾ ಪ್ರಾರ್ಥಿಸಬೇಕು. ಏಕೆಂದರೆ, ಪರಮತ್ರಿತ್ವ ದೇವರು ನಿಮ್ಮ ಮೇಲೆ ಹೇರಳವಾದ ಕೃಪಾಶೀರ್ವಾದಗಳನ್ನು ಹಾಗೂ ಸ್ಪೂರ್ತಿಯನ್ನು ಸುರಿಸುತ್ತಾರೆ" ಎಂದು ಪೋಪ್ ಫ್ರಾನ್ಸಿಸ್ ಇದೇ ವೇಳೆ ತಮ್ಮ ಸಂದೇಶದಲ್ಲಿ ನುಡಿದಿದ್ದಾರೆ.
ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ನಮ್ಮಲ್ಲಿ ಇಲ್ಲದಿರುವುದನ್ನು ನಾವು ನೀಡಲಾಗುವುದಿಲ್ಲ. ಅಂತೆಯೇ, ನಾವು ಅನುಭವಿಸದ ಹೊರತು, ನಮ್ಮ ಅನುಭವವನ್ನು ಇತರರಿಗೆ ಮನವರಿಕೆ ಮಾಡಿಕೊಡಲಾಗುವುದಿಲ್ಲ. ನಮ್ಮ ಕಣ್ಣುಗಳು ನೋಡದ್ದನ್ನು ನಾವು ಇತರರಿಗೆ ತೋರಿಸಲಾಗುವುದಿಲ್ಲ. ಹಾಗಾಗಿ, ನಾವು ಅನುಭವಿಸಿದ ಧರ್ಮಸಭೆಯ ಪ್ರೀತಿಯನ್ನು ಸುವಾರ್ತಾ ಪ್ರಸಾರದ ಮೂಲಕ ನಾವು ಇತರರಿಗೆ ನೀಡಿದಾಗ ಮಾತ್ರವೇ ನಾವು ಧರ್ಮಸಭೆಯ ಪ್ರೀತಿಯ ಭಾಷೆಯನ್ನು ಮಾತನಾಡಲು ಸಾಧ್ಯ" ಎಂದು ಹೇಳಿದ್ದಾರೆ.