ವಿಶ್ವಗುರುಗಳ ಡಿಸೆಂಬರ್ ತಿಂಗಳ ಪ್ರಾರ್ಥನಾ ಕೋರಿಕೆ: ಭರವಸೆಯ ಯಾತ್ರಿಕರಿಗೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಡಿಸೆಂಬರ್ ತಿಂಗಳ ಪ್ರಾರ್ಥನಾ ಉದ್ದೇಶವನ್ನು ಬಿಡುಗಡೆ ಮಾಡಿದ್ದು, ಜ್ಯೂಬಿಲಿ ವರ್ಷದಲ್ಲಿ ನಾವೆಲ್ಲರೂ ಭರವಸೆಯ ಯಾತ್ರಿಕರಾಗುವಂತೆ ಪರಸ್ಪರ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.
"ಮುಂಬರುವ ಜ್ಯೂಬಿಲಿ ವರ್ಷದಲ್ಲಿ ನಮ್ಮ ವಿಶ್ವಾಸ ಇಮ್ಮಡಿಯಾಗಲಿ ಎಂದು ಪ್ರಾರ್ಥಿಸೋಣ. ನಮ್ಮ ಬದುಕಿನಲ್ಲಿ ಪುನರುತ್ಥಾನರಾದ ಕ್ರಿಸ್ತರನ್ನು ನಾವು ಮನಗಾಣುವಂತಾಗಲಿ. ಜ್ಯೂಬಿಲಿಯು ನಮ್ಮೆಲ್ಲರನ್ನು ಕ್ರೈಸ್ತ ಭರವಸೆಯ ಯಾತ್ರಿಕರನ್ನಾಗಿ ಮಾಡಲಿ." ಎಂದು ಪೋಪ್ ಫ್ರಾನ್ಸಿಸ್ ಅವರು ಡಿಸೆಂಬರ್ ತಿಂಗಳ ಪ್ರಾರ್ಥನಾ ಉದ್ದೇಶವನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಹೇಳಿದ್ದಾರೆ.
ಈ ಕುರಿತು ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ನಮ್ಮ ಜಗತ್ತನ್ನು ಅನೇಕ ಸಂಕಷ್ಟಗಳು ಹಾಗೂ ಪಿಡುಗುಗಳು ಭಾದಿಸುತ್ತಿವೆ. ಈ ಸಂದರ್ಭದಲ್ಲಿ ನಮಗೆ ಹಿಂದೆಂದಿಗಿಂತಲೂ ಭರವಸೆಯ ಅವಶ್ಯಕತೆ ಇದೆ" ಎಂದು ಹೇಳಿದ್ದಾರೆ. "ಕ್ರೈಸ್ತ ಭರವಸೆ ಎಂಬುದು ದೇವರ ಅನುಗ್ರಹವಾಗಿದ್ದು, ಅದು ನಮ್ಮ ಜೀವನವನ್ನು ಸಂತೋಷದಿಂದ ತುಂಬುತ್ತದೆ" ಎಂದು ಅವರು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
ಜ್ಯೂಬಿಲಿಯನ್ನು ಆಚರಿಸಲು ಧರ್ಮಸಭೆಯು ಸಿದ್ಧಗೊಳ್ಳುತ್ತಿರುವಾಗ ನಾವೆಲ್ಲರೂ ಭರವಸೆಯ ಯಾತ್ರಿಕರಾಗಬೇಕು ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು "ಭರವಸೆ ಎಂದಿಗೂ ನಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂಬುದನ್ನು ನಾವು ಎಂದಿಗೂ ಮರೆಬಾರದು" ಎಂದು ಹೇಳಿದ್ದಾರೆ.
ನಾವೆಲ್ಲರೂ ಭರವಸೆಯ ಯಾತ್ರಿಕರಾಗಿ, ಈ ಪಯಣದಲ್ಲಿ ಒಬ್ಬರಿಗೊಬ್ಬರು ನೆರವಾಗೋಣ ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು ಇದಕ್ಕಾಗಿ ನಾವು ಭರವಸೆಯಿಂದ ಇರುವುದು ಅತ್ಯವಶ್ಯಕವಾಗಿದೆ ಎಂದು ಹೇಳಿದ್ದಾರೆ.