ನೂತನ ರಾಯಭಾರಿಗಳಿಗೆ ಪೋಪ್: ಜಗತ್ತು ಯುದ್ಧದಿಂದ ದಣಿದಿದೆ
ವರದಿ: ಲೀಸಾ ಝೆಂಗಾರಿನಿ, ಅಜಯ್ ಕುಮಾರ್
ವಿವಿಧ ದೇಶಗಳಿಂದ ಪವಿತ್ರ ಪೀಠ ವ್ಯಾಟಿಕನ್ನಿಗೆ ರಾಯಭಾರಿಗಳಾಗಿ ನೇಮಿತರಾಗಿರುವ ಹನ್ನೊಂದು ನೂತನ ರಾಯಭಾರಿಗಳನ್ನು ವ್ಯಾಟಿಕನ್ ನಗರದಲ್ಲಿ ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಶಾಂತಿ ಹಾಗೂ ಸಹಯೋಗದಲ್ಲಿ ಮುಂದುವರೆಯುವಂತೆ ಹೇಳಿದ್ದಾರೆ. ಯುದ್ಧದಿಂದ ದಣಿದಿರುವ ಜಗತ್ತಿನಲ್ಲಿ ಭರವಸೆಯ ಬೀಜಗಳನ್ನು ಬಿತ್ತಬೇಕು ಎಂದು ಅವರು ಹೇಳಿದ್ದಾರೆ.
ಭಾರತ, ಜೋರ್ಡನ್, ಡೆನ್ಮಾರ್ಕ್, ಲಕ್ಸೆಂಬರ್ಗ್, ಸಾವೊ ತೋಮ್, ರವಾಂಡ, ಟರ್ಕ್ಮೆನಿಸ್ತಾನ್, ಅಲ್ಜೀರಿಯಾ, ಬಾಂಗ್ಲಾದೇಶ, ಜಿಂಬಾಬ್ವೆ, ಹಾಗೂ ಕೆನ್ಯಾ ದೇಶಗಳ ರಾಯಭಾರಿ ಪ್ರತಿನಿಧಿಗಳಿಗೆ ಪೋಪ್ ಫ್ರಾನ್ಸಿಸ್ ಅವರು ಅಧಿಕೃತ ಪತ್ರಗಳನ್ನು ನೀಡಿದರು. ಈ ಜಗತ್ತು ಅತ್ಯಂತ ಸವಾಲಿನ ಸನ್ನಿವೇಷಗಳಾದ ಹವಾಮಾನ ಬದಲಾವಣೆ ಹಾಗೂ ಯುದ್ಧಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನೀವು ರಾಯಭಾರಿಗಳಾಗಿದ್ದೀರಿ. ಈ ಸಂದರ್ಭದಲ್ಲಿ ನೀವು ಅತ್ಯಂತ ಜತನದಿಂದ ಕಾರ್ಯನಿರ್ವಹಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
"ಡಿಪ್ಲೊಮೆಸಿ ಅಥವಾ ರಾಯಭಾರ ಎಂಬುದು ಅತ್ಯಂತ ತಾಳ್ಮೆಯನ್ನು ಬೇಡುವ ಕೆಲಸವಾಗಿದ್ದು, ಈ ಸವಾಲುಗಳಿಗೆ ಸರಳ ಪರಿಹಾರ ಎಂಬುದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಲು ಕೇವಲ ಒಂದೆರಡು ದೇಶಗಳು ಅಥವಾ ಜನರ ಗುಂಪಿನಿಂದ ಸಾಧ್ಯವಾಗುವುದಿಲ್ಲ." ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಪವಿತ್ರ ಪೀಠವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸದಾ ತಟಸ್ಥ ನೀತಿಯನ್ನು ಅನುಸರಿಸುತ್ತದೆ. ಸಂವಾದದ ಮೂಲಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಬಯಸುತ್ತದೆ" ಎಂದು ಹೇಳಿದ್ದಾರೆ. ಅಂತಿಮವಾಗಿ ಅವರು ಈ ವಿಷಮ ಕಾಲಘಟ್ಟದಲ್ಲಿ ರಾಯಭಾರಿಗಳಾಗಿರುವ ನೀವು ಭರವಸೆಯನ್ನು ಬಿತ್ತುವವರಾಗಬೇಕು ಎಂದು ಹೇಳಿದ್ದಾರೆ.